ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಇಂಥ ಸಮಸ್ಯೆಗೊಳಗಾದ ರೈತರಿಗೆ ಕಾನೂನಿನ ಮೂಲಕ ನ್ಯಾಯ ಒದಗಿಸಲು ಸಿದ್ಧವಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಹಾನಗಲ್ಲ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದೆ. ಇಂಥ ಸಮಸ್ಯೆಗೊಳಗಾದ ರೈತರಿಗೆ ಕಾನೂನಿನ ಮೂಲಕ ನ್ಯಾಯ ಒದಗಿಸಲು ಸಿದ್ಧವಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶನಿವಾರ ಹಾನಗಲ್ಲ ತಾಲೂಕಿನ ಹರನಗಿರಿ ಗ್ರಾಮದ ರೈತ ಚನ್ನಪ್ಪ ಬಾಳಿಕಾಯಿ ಅವರ ಮನೆಗೆ ಭೇಟಿ ನೀಡಿ, ಅವರಿಗಾಗಿರುವ ಅನ್ಯಾಯದ ಕುರಿತು ಮಾಹಿತಿ ಪಡೆದುಕೊಂಡರು. ಪಿತ್ರಾರ್ಜಿತವಾಗಿ ಬಂದ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದ ಚನ್ನಪ್ಪ ಬಾಳಿಕಾಯಿ ಅವರ ೪-೩೬ ಎಕರೆ ಜಮೀನನ್ನು ೨೦೧೫ರಲ್ಲಿ ಯಾವುದೇ ನೊಟೀಸ್ ನೀಡದೇ, ವಕ್ಫ್ ಆಸ್ತಿ ಎಂದು ದಾಖಲಿಸಿ ಅಧಿಕಾರಿಗಳನ್ನು ಬಳಸಿಕೊಂಡು ಬೆಳೆ ನಾಶಪಡಿಸಿ ಕಾನೂನುಬಾಹಿರವಾಗಿ ವಶಪಡಿಸಿಕೊಂಡಿದ್ದಾರೆ. ಆದರೆ ಜಮೀನನ್ನು ವಕ್ಫ್ ಇಲಾಖೆಗೆ ಸೇರಿಸದೇ ಮೊಹಮ್ಮದ ಯುಸುಫ್ ಮೊಕಾಶಿ ಎಂಬುವವರು ಈಗ ಸಾಗುವಳಿ ಮಾಡುತ್ತಿದ್ದಾರೆ. ನಿಜವಾದ ರೈತ ಜಮೀನು ಕಳೆದುಕೊಂಡು ನ್ಯಾಯಾಲಯಕ್ಕೆ ಅಲೆದಾಡುವಂಥ ಸ್ಥಿತಿ ಎದುರಾಗಿದೆ. ಇದರೊಂದಿಗೆ ಇವರ ಪಕ್ಕದ ಹಜರತಲಿ ಮೊಕಾಶಿ ಎಂಬುವವರ ೪-೩೦ ಎಕರೆ ಜಮೀನನ್ನು ಅಧಿಕಾರಿಗಳೇ ವಶಪಡಿಸಿಕೊಂಡು ಮೊಹಮ್ಮದ ಯುಸುಫ್ ಮೊಕಾಶಿ ಎಂಬುವವರಿಗೆ ನೀಡಿದ್ದಾರೆ. ಬಾಳಿಕಾಯಿ ಅವರ ಪುತ್ರ ವಕ್ಫ್ ದಾಖಲೀಕರಣದಿಂದಾಗಿ ಮನನೊಂದು ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅದನ್ನು ನಮ್ಮ ಸಂಸದ ತೇಜಸ್ವಿ ಸೂರ್ಯ ಟ್ವೀಟರ್‌ನಲ್ಲಿ ಹಾಕಿದ್ದಾರೆ. ಅದಕ್ಕೆ ಅವರ ಮೇಲೆ ರಾಜ್ಯದ ಮಂತ್ರಿಗಳು ಎಫ್‌ಐಆರ್ ಮಾಡಿಸಿದ್ದಾರೆ. ನೊಂದವರ ಪರವಾದ ಧ್ವನಿ ಅಡಗಿಸಲು ಯತ್ನಿಸುತ್ತಿದ್ದಾರೆ. ವಿವೇಚನೆಯಿಲ್ಲದೇ ಪ್ರಕರಣ ದಾಖಲಿಸಿದ್ದಕ್ಕೆ ಅಧಿಕಾರಿಗಳೂ ಉತ್ತರಿಸಬೇಕಾಗುತ್ತದೆ. ಇದು ಸಿದ್ದರಾಮಯ್ಯ ಅವರ ಸರ್ಕಾರದ ದ್ವೇಷದ ರಾಜಕಾರಣವೆಂಬುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹರನಗಿರಿಯ ರೈತರಿಬ್ಬರಿಬ್ಬರ ಪ್ರಕರಣ ಸದ್ಯ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಅವೆಲ್ಲವನ್ನೂ ಪರಿಶೀಲಿಸಿ ಅವರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಅದರ ಕಾನೂನು ಹೋರಾಟದ ಖರ್ಚು-ವೆಚ್ಚವನ್ನೂ ನಾವೇ ಭರಿಸಲು ತೀರ್ಮಾನಿಸಿದ್ದೇವೆ. ಸತತ ೫೧ ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದ ರೈತರ ಆಸ್ತಿಗಳನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರ ಮುಂದಾಗಿರುವುದು ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಹೊಲವನ್ನು ವಶಪಡಿಸಿಕೊಂಡಿರುವುದಕ್ಕೆ ಅಧಿಕಾರಿಗಳೇ ಫೋರ್ಜರಿ ಸಹಿ ಹಾಕಿದ್ದಾರೆ ಎಂಬುದೂ ಬೆಳಕಿಗೆ ಬಂದಿದೆ. ನಮ್ಮದು ಅಧಿಕಾರಿಗಳ ವಿರುದ್ಧ ಹೋರಾಟವಲ್ಲ. ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ್ದೇವೆ. ಈಗಾಗಲೇ ಮಾಜಿ ಸಚಿವ ಗೋವಿಂದ್ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಸತ್ಯಶೋಧನ ಸಮಿತಿ ರಚಿಸಲಾಗಿದೆ. ಸಮಿತಿ ರಾಜ್ಯಾದ್ಯಂತ ಸಂಚರಿಸಿ ಮಾಹಿತಿ ಕಲೆಹಾಕುತ್ತಿದೆ. ಸರ್ಕಾರದ ಜನವಿರೋಧಿ, ರಾಜ್ಯ ಸರ್ಕಾರದ ರೈತವಿರೋಧಿ ನೀತಿಯನ್ನು ವಿರೋಧಿಸಿ ಹೋರಾಟ ಕೈಗೊಳ್ಳಲಾಗುವುದು ಎಂದರು.ಸಂಸದ ತೇಜಸ್ವಿ ಸೂರ್ಯ ಅವರು ಮೃತ ರೈತನ ತಂದೆ ನೀಡಿದ ಹೇಳಿಕೆ ಆಧರಿಸಿ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅದಕ್ಕೆ ಸಚಿವ ಪ್ರಿಯಾಂಕ ಖರ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ದೂರು ದಾಖಲಿಸಲೂ ಸೂಚಿಸಿದ್ದಾರೆ. ಪ್ರಕರಣವನ್ನು ಸರಿಯಾಗಿ ತಿಳಿದುಕೊಳ್ಳದೇ ಮಾತನಾಡುವುದು ಸರಿಯಲ್ಲ. ಅವರಿಗೆ ನಾಲಿಗೆಯ ಮೇಲೆ ಹಿಡಿತವಿರಬೇಕು ಎಂದು ಸಚಿವ ಪ್ರಹ್ಲಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗೋವಿಂದ ಕಾರಜೋಳ, ಜಿ.ಎಂ. ಸಿದ್ದೇಶ, ಎನ್. ರವಿಕುಮಾರ, ಮುರುಗೇಶ ನಿರಾಣಿ, ಶಿವರಾಜ ಸಜ್ಜನರ, ಸೀಮಾ ಮಸೂತಿ, ಮಾಲತೇಶ ಸೊಪ್ಪಿನ, ಸೋಮಶೇಖರ ಕೋತಂಬರಿ, ಭೋಜರಾಜ ಕರೂದಿ, ಮಹೇಶ ಕಮಡೊಳ್ಳಿ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.