ಕ್ಷೇತ್ರದ ಜನರೊಂದಿಗೆ ಸಚಿವ ಮಧು ಆತ್ಮೀಯ ಕ್ಷಣ

KannadaprabhaNewsNetwork |  
Published : Aug 27, 2026, 01:45 AM IST
ಫೋಟೊ:೨೬ಕೆಪಿಸೊರಬ-೦೧ : ಸೊರಬ ತಾಲೂಕಿನ ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು ಬೆಂಗಳೂರಿನ ಶ್ರೀ ಅಮ್ಮ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರು ಆತ್ಮೀಯವಾಗಿ ಬರಮಾಡಿಕೊಂಡರು. | Kannada Prabha

ಸಾರಾಂಶ

ರಾಜಕೀಯದಲ್ಲಿ ಅಧಿಕಾರಕ್ಕಿಂತ ಮಿಗಿಲಾಗಿ ಜನರೊಂದಿಗೆ ಇರುವ ಆತ್ಮೀಯತೆ, ಪ್ರೀತಿ ಮತ್ತು ಮಮಕಾರವೇ ಒಬ್ಬ ಜನನಾಯಕನ ನಿಜವಾದ ಆಸ್ತಿ. ಇಂತಹ ಅಪರೂಪದ ಜನಸ್ನೇಹದ ಕ್ಷಣವೊಂದಕ್ಕೆ ಸಚಿವ ಮಧು ಬಂಗಾರಪ್ಪ ಅವರ ಬೆಂಗಳೂರಿನ ಸದಾಶಿವನಗರದ ಶ್ರೀ ಅಮ್ಮ ಗೃಹ ಕಚೇರಿ ಮಂಗಳವಾರ ಸಾಕ್ಷಿಯಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ರಾಜಕೀಯದಲ್ಲಿ ಅಧಿಕಾರಕ್ಕಿಂತ ಮಿಗಿಲಾಗಿ ಜನರೊಂದಿಗೆ ಇರುವ ಆತ್ಮೀಯತೆ, ಪ್ರೀತಿ ಮತ್ತು ಮಮಕಾರವೇ ಒಬ್ಬ ಜನನಾಯಕನ ನಿಜವಾದ ಆಸ್ತಿ. ಇಂತಹ ಅಪರೂಪದ ಜನಸ್ನೇಹದ ಕ್ಷಣವೊಂದಕ್ಕೆ ಸಚಿವ ಮಧು ಬಂಗಾರಪ್ಪ ಅವರ ಬೆಂಗಳೂರಿನ ಸದಾಶಿವನಗರದ ಶ್ರೀ ಅಮ್ಮ ಗೃಹ ಕಚೇರಿ ಮಂಗಳವಾರ ಸಾಕ್ಷಿಯಾಯಿತು.

೨೦೦೩ರಲ್ಲಿ ಶ್ರೀ ಅಮ್ಮ ನಿಲಯದ ಗೃಹಪ್ರವೇಶ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ತಮ್ಮ ಕ್ಷೇತ್ರದ ಜನರನ್ನು ಸ್ವತಃ ಆಹ್ವಾನಿಸಿ, ಸೊರಬ ಜನತೆಯ ಪಾದದ ಧೂಳಿನಿಂದ ನನ್ನ ಮನೆ ಪವಿತ್ರವಾಗುತ್ತದೆ ಎಂದು ಹೇಳಿದ್ದರು. ಅಧಿಕಾರದ ಸ್ಥಾನದಲ್ಲಿದ್ದರೂ ತಮ್ಮ ಜನರೊಂದಿಗೆ ಹೊಂದಿದ್ದ ಆ ಆತ್ಮೀಯತೆ ಇಂದಿಗೂ ಸೊರಬದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಅದೇ ಪ್ರೀತಿ, ಮಮಕಾರ ಮತ್ತು ಜನರ ಮೇಲಿನ ಗೌರವವನ್ನು ತಂದೆಯ ಹಾದಿಯಲ್ಲೇ ಮುಂದುವರಿಸಿರುವ ಸಚಿವ ಮಧು ಬಂಗಾರಪ್ಪ ಅವರು ಇಂದು ಶ್ರೀ ಅಮ್ಮ ನಿಲಯಕ್ಕೆ ಸೊರಬ ಕ್ಷೇತ್ರದಿಂದ ಆಗಮಿಸಿದ್ದ ನೂರಾರು ಜನರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೂರದ ಊರುಗಳಿಂದ ಬಂದ ಪ್ರತಿಯೊಬ್ಬರಿಗೂ ಸಮಯ ನೀಡಿದ ಸಚಿವರು, ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದ ಜನರೊಂದಿಗೆ ಆತ್ಮೀಯವಾಗಿ ಮಾತನಾಡಿದರು. ಬಹುಕಾಲದ ನಂತರ ತಮ್ಮ ನಾಯಕನನ್ನು ಇಷ್ಟು ಹತ್ತಿರದಿಂದ ಕಂಡ ಅಭಿಮಾನಿಗಳು ಸಚಿವರೊಂದಿಗೆ ಫೋಟೋ ತೆಗೆಸಿಕೊಂಡು ಸಂತಸಪಟ್ಟರು.

ಈ ಸಂದರ್ಭದಲ್ಲಿ ಸಚಿವರು, ಇದು ನಿಮ್ಮ ಮನೆ. ಯಾವುದೇ ಸಂಕೋಚ ಬೇಡ. ಮನೆಯ ಮೂಲೆ ಮೂಲೆಗೂ ಹೋಗಿ ನೋಡಿ. ನಾನು ನಿಮ್ಮ ಸೇವಕ ಅಷ್ಟೇ ಎಂದು ಹೇಳಿದಾಗ, ಅಲ್ಲಿದ್ದವರ ಮುಖದಲ್ಲಿ ಹೆಮ್ಮೆಯೂ ಸಂತೋಷವೂ ಮನೆ ಮಾಡಿತ್ತು. ಸಚಿವರ ಈ ಮಾತು ಜನರೊಂದಿಗೆ ಅವರಿಗಿರುವ ಸಂಬಂಧದ ಆಳವನ್ನು ಮತ್ತೊಮ್ಮೆ ತೋರಿಸಿತು. ತಮ್ಮದೇ ಮನೆಯೊಂದಕ್ಕೆ ಬಂದವರಂತೆ ಜನರು ಮನೆಯನ್ನು ಸಂಪೂರ್ಣವಾಗಿ ವೀಕ್ಷಿಸಿದರು. ತಮಗೆ ಇಷ್ಟವಾದ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು, ಆ ಕ್ಷಣಗಳನ್ನು ನೆನಪಾಗಿ ಉಳಿಸಿಕೊಂಡರು.

ಸೊರಬದಿಂದ ಆಗಮಿಸಿದ್ದ ನೂರಾರು ಜನರಿಗೆ ಉಪಹಾರದ ವ್ಯವಸ್ಥೆಯನ್ನೂ ಸಚಿವರು ಖುದ್ದು ಗಮನಿಸಿ, ಎಲ್ಲರೂ ಮನೆಯೊಳಗೆ ಕುಳಿತು ಆತ್ಮೀಯವಾಗಿ ಉಪಹಾರ ಸೇವಿಸುವಂತೆ ವ್ಯವಸ್ಥೆ ಮಾಡಿಸಿದರು. ತಮ್ಮ ಜನರೊಂದಿಗೆ ಕಳೆದ ಈ ಕ್ಷಣಗಳೇ ಸಚಿವರಿಗೆ ವಿಶೇಷವಾಗಿದ್ದವು.

ಜನರು ವಾಪಸ್ ತೆರಳುವ ಸಂದರ್ಭದಲ್ಲಿ ಸಚಿವರು ಮತ್ತೊಮ್ಮೆ ಕಾಳಜಿಯಿಂದ, ಎಲ್ಲರೂ ವಿಧಾನಸೌಧಕ್ಕೆ ಹೋಗಿ. ವಾಹನದ ವ್ಯವಸ್ಥೆ ಮಾಡಿದ್ದೇನೆ. ಮಧ್ಯಾಹ್ನ ಎಲ್ಲರಿಗೂ ಊಟದ ವ್ಯವಸ್ಥೆ ಇರುತ್ತದೆ. ಊಟ ಮಾಡಿಕೊಂಡು ಸುರಕ್ಷಿತವಾಗಿ ಊರು ತಲುಪಿ ಎಂದು ಕಿವಿಮಾತು ಹೇಳಿದರು.

ಒಬ್ಬ ಸಚಿವರಾಗಿ ಮಾತ್ರವಲ್ಲ, ತಮ್ಮ ಮನೆಯವರನ್ನು ಆತ್ಮೀಯವಾಗಿ ನೋಡಿಕೊಳ್ಳುವ ಕುಟುಂಬದ ಹಿರಿಯರಂತೆ ಮಧು ಬಂಗಾರಪ್ಪ ಅವರು ನಡೆದುಕೊಂಡ ಈ ಕ್ಷಣಗಳು ಸೊರಬದ ಜನರ ಮನಸ್ಸನ್ನು ಮುಟ್ಟಿದವು. ತಂದೆ ಬಂಗಾರಪ್ಪ ಅವರ ಕಾಲದಲ್ಲಿ ಆರಂಭವಾದ ನನ್ನ ಜನ-ನನ್ನ ಮನೆ ಎನ್ನುವ ಆತ್ಮೀಯತೆಯ ಪರಂಪರೆ, ಇಂದು ಮಗ ಮಧು ಬಂಗಾರಪ್ಪ ಅವರಲ್ಲೂ ಅದೇ ಮಮಕಾರದೊಂದಿಗೆ ಮುಂದುವರಿದಿದೆ.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಮಾಜಿ ಸದಸ್ಯ ಸುನಿಲ್‌ಗೌಡ, ಮುಖಂಡರಾದ ಪ್ರಸನ್ನಕುಮಾರ್, ಪ್ರವೀಣ್ ಶಾಂತಗೇರಿ, ಫಯಾಜ್ ಅಹ್ಮದ್, ಅತಿಕುರ್ ರೆಹಮಾನ್ ಸೇರಿದಂತೆ ಮಹಿಳಾ ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನ್ಯಾಯಬೆಲೆ ಅಂಗಡಿಗಳಲ್ಲಿ ಬಿಗಡಾಯಿಸಿದ ಸರ್ವರ್ ಸಮಸ್ಯೆ
ಮಠಗಳು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದು: ಸುತ್ತೂರು ಶ್ರೀಗಳು