ಮಂಡ್ಯ ಮಂಜುನಾಥ
ಶಾಸಕರ ಪುತ್ರಿಯೊಬ್ಬರು ಪಿಎಸ್‌ಐ ಅವರಿಗೆ ಕಪಾಳಮೋಕ್ಷ ನಡೆಸಿದ ಪ್ರಕರಣ ಪೊಲೀಸರ ನೈತಿಕ ಬಲವನ್ನೇ ಕುಗ್ಗಿಸುವಂತೆ ಮಾಡಿದೆ. ಕಪಾಳಮೋಕ್ಷ ಮಾಡಿದ ಶಾಸಕರ ಪುತ್ರಿ ವಿರುದ್ಧ ಪಿಎಸ್‌ಐ ಖುದ್ದು ದೂರು ನೀಡಿದ್ದರೂ ಇದುವರೆಗೂ ಆಕೆಗೆ ನೋಟಿಸ್ ನೀಡುವ, ಕರೆದು ವಿಚಾರಣೆ ನಡೆಸುವ ಸಾಮಾನ್ಯ ಪ್ರಕ್ರಿಯೆಯನ್ನೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿಲ್ಲ. ಮೇಲಿನ ಹಂತದ ಅಧಿಕಾರಿಗಳ ಈ ನಡೆ ಕೆಳಹಂತದ ಪೊಲೀಸ್ ಅಧಿಕಾರಿಗಳಲ್ಲಿ ತೀವ್ರ ಅಸಮಾಧಾನ ಮೂಡುವಂತೆ ಮಾಡಿದೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರ ಪುತ್ರಿ ಐಶ್ವರ್ಯ ಆ.೧೨ರಂದು ಭೀಮನ ಅಮಾವಾಸ್ಯೆ ದಿನ ಆರತಿ ಉಕ್ಕಡದಲ್ಲಿ ಗರ್ಭಗುಡಿ ಬಳಿಗೆ ತಮ್ಮನ್ನು ಬಿಡಲಿಲ್ಲವೆಂಬ ಕಾರಣಕ್ಕೆ ದೇವಸ್ಥಾನದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್‌ಐ ಸವಿತಾ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಘಟನೆ ಸಂಬಂಧ ಪಿಎಸ್‌ಐ ಸವಿತಾ ಅವರಿ ಐಶ್ವರ್ಯ ವಿರುದ್ಧ ದೂರು ದಾಖಲಿಸಿ ೧೫ ದಿನ ಕಳೆದರೂ ಇದುವರೆಗೂ ಐಶ್ವರ್ಯ ಅವರನ್ನು ವಿಚಾರಣೆಗೆ ಕರೆಸಲು ನೋಟಿಸ್ ಜಾರಿ ಮಾಡಿಲ್ಲ. ವಿಚಾರಣೆಗೆ ಕರೆದು ದೇವಸ್ಥಾನದಲ್ಲಿ ನಡೆದಿದ್ದಾದರೂ ಏನು, ಯಾರದ್ದು ತಪ್ಪು, ಯಾರದ್ದು ಸರಿ ಎಂದು ವಿಚಾರಿಸುವ ಸಾಮಾನ್ಯ ಪ್ರಕ್ರಿಯೆಯನ್ನೂ ನಡೆಸದಿರುವುದು ಹಿರಿಯ ಅಧಿಕಾರಿಗಳ ಅಸಮರ್ಥತೆ ತೋರಿಸುತ್ತಿದೆ. ರಾಜಕೀಯ ಒತ್ತಡಕ್ಕೆ ಮಣಿದು ಮೌನಕ್ಕೆ ಶರಣಾಗಿರುವುದು ಕೆಳಹಂತದ ಪೊಲೀಸರ ನೈತಿಕ ಬಲವನ್ನೇ ಕುಗ್ಗಿಸುವಂತೆ ಮಾಡಿದೆ.ಒಳಗೊಳಗೇ ಆಕ್ರೋಶ:
ಹಿರಿಯರಿಂದ ಸಿಗದ ಬೆಂಬಲ:
ಇತ್ತೀಚೆಗೆ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮುಖಂಡರೊಬ್ಬರು ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಆ ಘಟನೆಯಲ್ಲಿ ಹಿರಿಯ ಅಧಿಕಾರಿಗಳು ಕೆಳಹಂತದ ಪೊಲೀಸರಿಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದರು. ಪಿಎಸ್‌ಐ ಮೇಲಿನ ಕಪಾಳಮೋಕ್ಷ ಪ್ರಕರಣವೂ ಅಷ್ಟೇ ಗಂಭೀರವಾಗಿದ್ದರೂ, ಹಿರಿಯ ಅಧಿಕಾರಿಗಳು ಪ್ರಕರಣ ಸಂಬಂಧ ಇದುವರೆಗೂ ತುಟಿಬಿಚ್ಚದಿರುವುದು ಪ್ರಭಾವಿಗಳಿಗೆ ತಾವು ಶರಣಾಗಿರುವುದನ್ನು ಸಾಬೀತುಪಡಿಸಿದೆ.
ಹಿರಿಯ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಕೆಳಹಂತದ ಅಧಿಕಾರಿಗಳೇ ಹಲವರ ಮೂಲಕ ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋಗಳನ್ನು ಹರಿಯಬಿಟ್ಟು ತಾವು ನಿರ್ದೋಷಿಗಳೆಂದು ಸಾಬೀತುಪಡಿಸಿಕೊಳ್ಳುವಂತಾಗಿದೆ. ಕೆಳಹಂತದ ಅಧಿಕಾರಿಗಳ ವಿರುದ್ಧವೇ ಕೆಲ ಹಿರಿಯ ಅಧಿಕಾರಿಗಳು ಒಳಸಂಚು, ಪಿತೂರಿ ನಡೆಸುತ್ತಿರುವುದು ಮತ್ತೊಂದು ದೌರ್ಭಾಗ್ಯ. ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳಿಂದಲೇ ಕೆಳಹಂತದ ಅಧಿಕಾರಿಗಳಿಗೆ ರಕ್ಷಣೆ ಇಲ್ಲದ ಮೇಲೆ ಜನಸಾಮಾನ್ಯರಿಗೆ ರಕ್ಷಣೆ ಸಿಗಲು ಹೇಗೆ ಸಾಧ್ಯ ಎನ್ನುವುದು ಜನರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ಸಾಮಾನ್ಯ ಜನರು, ಕೆಳಹಂತದ ಪೊಲೀಸ್ ಅಧಿಕಾರಿಗಳಿಗೆ ಸಿಗದಿರುವ ಬೆಂಬಲ, ರಕ್ಷಣೆ ಪ್ರಭಾವಿಗಳಿಗೆ ತಕ್ಷಣವೇ ಸಿಗುವುದು ಮಂಡ್ಯದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವಿಶೇಷತೆ. ಇದಕ್ಕೆ ಇತ್ತೀಚೆಗೆ ನಗರದ ಹೊರವಲಯದಲ್ಲಿ ನಡೆದ ಶೂಟೌಟ್ ಪ್ರಕರಣ, ಆಸ್ಪತ್ರೆಯಲ್ಲಿ ರಾಜಾತಿಥ್ಯದಲ್ಲಿದ್ದ ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದ ಆರೋಪಿ ಮಹಮ್ಮದ್ ಹುಸೇನ್ ಪ್ರಕರಣ ಸಾಕ್ಷಿ.
ಇದಾದ ಬಳಿಕ ಸರ್ಕಾರಿ ಭೂಮಿ ಕಬಳಿಕೆಯ ಪ್ರಮುಖ ಆರೋಪಿ ಮಹಮ್ಮದ್ ಹುಸೇನ್ ವಿಚಾರಣಾಧೀನ ಕೈದಿಯಾಗಿದ್ದು ಆತನ ಮೇಲೆ ನಿಗಾ ವಹಿಸುವಲ್ಲಿ, ಆತನ ಕೊಠಡಿಯಲ್ಲಿ ಮಹಿಳೆ ಪತ್ತೆಯಾಗಿರುವುದು ಪೊಲೀಸ್ ವೈಫಲ್ಯವೆಂಬುದನ್ನು ಜಗಜ್ಜಾಹೀರುಗೊಳಿಸಿದೆ. ಕಾರಾಗೃಹದಿಂದ ಆಸ್ಪತ್ರೆಗೆ ದಾಖಲಾಗುವ ಕೈದಿಯ ಆರೋಗ್ಯ, ಆತನ ಚಲನ-ವಲನಗಳ ಬಗ್ಗೆ ನಿಗಾ ವಹಿಸಬೇಕಾಗಿದ್ದು ಪೊಲೀಸರ ಕರ್ತವ್ಯ. ಇಲ್ಲಿ ಪೊಲೀಸ್ ಗುಪ್ತದಳದ ವೈಫಲ್ಯವೂ ಕಂಡುಬಂದಿದೆ. ಇಲ್ಲಿಯೂ ಕೂಡ ರಾಜಕೀಯ ಪ್ರಭಾವಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
- ಕೆ.ಆರ್.ರವೀಂದ್ರ, ಸಾಮಾಜಿಕ ಹೋರಾಟಗಾರ
ಹಿರಿಯ ಅಧಿಕಾರಿಗಳು ತಮ್ಮ ಸ್ಟಾರ್‌ಡಮ್ ಕಟ್ಟುತ್ತಿದ್ದಾರೆಯೇ ವಿನಃ ಇಲಾಖೆಯ ವರ್ಚಸನ್ನು ಹೆಚ್ಚಿಸುವ ಕೆಲಸವನ್ನೇ ಮಾಡುತ್ತಿಲ್ಲ. ಕೆಳಹಂತದ ಪೊಲೀಸರ ಮೇಲೆ ದರ್ಪ ತೋರಿಸುವವರು, ಪ್ರಭಾವಿಗಳ ಮೇಲೆ ಯಾವುದೇ ಕ್ರಮ ವಹಿಸದೆ ಶರಣಾಗತಿ ತೋರುತ್ತಾ, ಜನಸಾಮಾನ್ಯರ ಮೇಲಷ್ಟೇ ವೀರಾವೇಷ ಪ್ರದರ್ಶಿಸುತ್ತಿದ್ದಾರೆ.- ಎಂ.ಬಿ.ನಾಗಣ್ಣಗೌಡ, ರಾಜ್ಯಾಧ್ಯಕ್ಷರು, ಕರುನಾಡ ಸೇವಕರು ಸಂಘಟನೆ