ಸಿಜೇರಿಯನ್ ಪ್ರಮಾಣ ಹೆಚ್ಚಳಕ್ಕೆ ಸಚಿವ ನಾರಾಯಣಸ್ವಾಮಿ ಕಳವಳ

KannadaprabhaNewsNetwork |  
Published : Mar 07, 2024, 01:45 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲೆಯಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀವ್ರ ಕಳವಳ ವ್ಯಕ್ತಪಡಿಸಿದರು.

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ಹೆಚ್ಚಳಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀವ್ರ ಕಳವಳ ವ್ಯಕ್ತಪಡಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್ಎಚ್ಎಂ) ಅಡಿಯಲ್ಲಿ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಸಿಜೇರಿಯನ್ ಹೆರಿಗೆ ಪ್ರಮಾಣ ಶೇ.30ರಷ್ಟಿದೆ. ಅದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಪ್ರಮಾಣ ಶೇ.65 ರಷ್ಟು ಹಾಗೂ ತುಮಕೂರಿನ ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಶೇ.70ರಷ್ಟಿರುವುದು ಆತಂಕಕಾರಿ ಬೆಳವಣಿಗೆ. ವೈದ್ಯರು ಸಿಜೇರಿಯನ್ ಪ್ರಮಾಣ ತಗ್ಗಿಸಿ, ಉತ್ತಮ ಆರೋಗ್ಯ ಸೇವೆ ನೀಡಬೇಕೆಂದರು.

ಎನ್ ಹೆಚ್ಎಂ ಅಡಿಯಲ್ಲಿ 10 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇದರ ಸುದುಪಯೋಗ ಆಗಬೇಕು. ನಾಯಕನಹಟ್ಟಿ 8 ಕೋಟಿ ರು., ಚಳ್ಳಕೆರೆಯಲ್ಲಿ 13 ಕೋಟಿ ರು. ಹಾಗೂ ಹಿರಿಯೂರು ನಗರದಲ್ಲಿ 6 ಕೋಟಿ ರು. ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಎನ್‌ಎಚ್‌ಎಂ ಅಡಿ 260 ಕೋಟಿ ರು. ವ್ಯಯಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಜಿಲ್ಲೆಯಲ್ಲಿ 2,25,250 ಜನರು ನೊಂದಣಿಯಾಗಿದ್ದಾರೆ. ಇದುವರೆಗೂ 51 ಕೋಟಿ ರು. ಹಣ ಯೋಜನೆಯಡಿ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಜನನಿ ಸುರಕ್ಷಾ ಯೋಜನೆ ಸೇರಿದಂತೆ ಅನೇಕ ಸೇವೆಗಳನ್ನು ಸಹ ನೀಡಲಾಗುತ್ತಿದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಸ್ಪಂದನೆ ಸಿಗುತ್ತಿಲ್ಲ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ನುರಿತ ವೈದ್ಯರಿಂದ ಸೇವೆ ದೊರೆಯದಿದ್ದರೆ, ಜನರು ರಾಜಕಾರಣಗಳಿಗೆ ಶಾಪ ಹಾಕುತ್ತಾರೆ. ಇತ್ತೀಚಿಗೆ ಪಾವಗಡದಲ್ಲಿ ಕುಟುಂಬ ಯೋಜನೆ ಹಾಗೂ ಸಿಜೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾದ ಮೂರು ಮಹಿಳೆಯರು ಮೃತರಾಗಿದ್ದಾರೆ. ವೈದ್ಯರು ಹಣಕ್ಕಾಗಿ ಸ್ಪರ್ಧೆ ಮಾಡಿ, ಯಾವುದೇ ಮುಂಜಾಗೃತ ಕ್ರಮ ಇಲ್ಲದೆ ಆಪರೇಷನ್ ಮಾಡಿದ ಪರಿಣಾಮ ಇದಾಗಿದೆ. ಪರಿಸ್ಥಿತಿ ಹೀಗಾದರೇ ಜನರು ವೈದ್ಯರು ನಂಬುವುದು ಹೇಗೆ ? ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಜೇರಿಯನ್ ಪ್ರಮಾಣ ಇಳಿಕೆ ಮಾಡಬೇಕು. ಅನಾರೋಗ್ಯ ಒಳಪಟ್ಟು ಆಗಮಿಸುವ ರೋಗಿಗಳಿಗೆ ಆರೋಗ್ಯ ಸುಧಾರಣೆ ಆಗಿ ಸುರಕ್ಷಿತವಾಗಿ ಮನೆಗೆ ತೆರಳುವಂತಾಗಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಜನರು ವೈದ್ಯೋ ನಾರಾಯಣೋ ಹರಿ ಎಂದು ಭಾವಿಸಿ ಗೌರವ ನೀಡುತ್ತಾರೆ. ವೈದ್ಯರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ವೈದ್ಯರು ಉತ್ತಮ ಸೇವೆ ನೀಡಬೇಕು. ಚಿತ್ರದುರ್ಗ ಜಿಲ್ಲೆ ಸದಾ ಕಲಾ ಬರಗಾಲಕ್ಕೆ ತುತ್ತಾಗಿ ಜನರು ಸಂಕಷ್ಟದ ಸ್ಥಿತಿಯಲ್ಲಿ ಇರುತ್ತಾರೆ. ಬಡವರೇ ಹೆಚ್ಚಾಗಿ ಜಿಲ್ಲಾ ಆಸ್ಪತ್ರೆ ಬರುತ್ತಾರೆ. ಅವರಿಗೆ ಸ್ಪಂದನೆ ನೀಡಬೇಕು. ರೋಗಿಗಳನ್ನು ಬೇರೆ ಕಡೆಗೆ ಶಿಫಾರಸ್ಸು ಮಾಡುವುದು ನಿಲ್ಲಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿವೆ. ಈ ನಿಟ್ಟಿನ ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಳೆಯ ಕಟ್ಟಡದಲ್ಲಿ ಇರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣ‌ವಾಗಿ ನೂತನ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಕೆ. ಅನ್ವರ್ ಭಾಷಾ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ.ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ರೇಣುಪ್ರಸಾದ್, ಚಿತ್ರದುರ್ಗ ವೈದ್ಯಕೀಯ ಕಾಲೇಜು ವಿಶೇಷಧಿಕಾರಿ ಡಾ.ಡಿ.ವೈ.ಯುವರಾಜ್, ‌ಜಿಲ್ಲಾ ಆರ್ ಸಿಹೆಚ್.ಅಧಿಕಾರಿ‌ ಡಾ.ಅಭಿನವ್ ಸೇರಿದಂತೆ, ಆರೋಗ್ಯ ರಕ್ಷಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮಕ್ಕಳ ತಜ್ಞ ಡಾ.ದೇವರಾಜ ಸ್ವಾಗತ ಕೋರಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಪ್ರಾಸ್ತಾವಿಕ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಗಳಿಯಲ್ಲಿ ಮಹಾವೀರ ಜಯಂತಿ ಆಚರಣೆ
ಮನುಕುಲ ಉದ್ದಾರಿಸಿದ ಮಹಾನ್ ಚೇತನ: ಶಿವಲೀಲಾ ಸದಾಶಿವ ಬುಟಾಳಿ