ಶಿವಕುಮಾರ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿದ್ದು ಸಚಿವ ಪಾಟೀಲ

KannadaprabhaNewsNetwork | Published : Apr 1, 2024 12:49 AM

ಸಾರಾಂಶ

ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿರುವ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿದ ಪುಣ್ಯಾತ್ಮ ಯಾರಾದರೂ ಇದ್ದರೆ ಅದು ಸಚಿವ ಶಿವಾನಂದ ಪಾಟೀಲ. ಅಂತಹ ಪುಣ್ಯಾತ್ಮನನ್ನು ಹುಲಿ...ಹುಲಿ ಎಂದು ಕೊಂಡಾಡುತ್ತಿರಿ. ಆಳಂದ ತಾಲೂಕಿನಲ್ಲಿ ಆರಂಭಿಸಿದ ಆ ಕಾರ್ಖಾನೆಯೂ ಬಂದ್‌ ಮಾಡಿಸಲು ಹೊರಟಿದ್ದಾರೆ. ನನ್ನ ಮೇಲೂ ಕೇಸ್‌ ಹಾಕಿಸಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲ ಮೇಲೆ ಹರಿಹಾಯ್ದರು.

ಕನ್ನಡಪ್ರಭ ವಾರ್ತೆ ಇಂಡಿ

ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿರುವ ಜ್ಞಾನಯೋಗಿ ಶಿವಕುಮಾರ ಸಕ್ಕರೆ ಕಾರ್ಖಾನೆ ಬಂದ್‌ ಮಾಡಿಸಿದ ಪುಣ್ಯಾತ್ಮ ಯಾರಾದರೂ ಇದ್ದರೆ ಅದು ಸಚಿವ ಶಿವಾನಂದ ಪಾಟೀಲ. ಅಂತಹ ಪುಣ್ಯಾತ್ಮನನ್ನು ಹುಲಿ...ಹುಲಿ ಎಂದು ಕೊಂಡಾಡುತ್ತಿರಿ. ಆಳಂದ ತಾಲೂಕಿನಲ್ಲಿ ಆರಂಭಿಸಿದ ಆ ಕಾರ್ಖಾನೆಯೂ ಬಂದ್‌ ಮಾಡಿಸಲು ಹೊರಟಿದ್ದಾರೆ. ನನ್ನ ಮೇಲೂ ಕೇಸ್‌ ಹಾಕಿಸಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲ ಮೇಲೆ ಹರಿಹಾಯ್ದರು.

ಅವರು ಭಾನುವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶ್ರೀಸಿದ್ಧೇಶ್ವರ ಮೆಡಿಕಲ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಹಕಾರಿ ಸಚಿವ ರಾಜಣ್ಣನವರನ್ನು ಮುಂದೆ ಮಾಡಿಕೊಂಡು ಸೌಹಾರ್ದ ಸಹಕಾರಿ ಸಂಘಗಳ ಮೇಲೆ ಕಾನೂನು ತಂದಿದ್ದಾರೆ. ಸಹಕಾರಿ ಸಂಘಗಳು ಡಿಸಿಸಿ ಬ್ಯಾಂಕಿನಲ್ಲಿಯೇ ಡಿಪಾಜಿಟ್‌ ಇಡಬೇಕು. ಅವರು ಕೊಡುವ ಬಡ್ಡಿಯಲ್ಲಿಯೇ ಇಡಬೇಕು ಎಂಬ ಕಾನೂನು ತಂದಿದ್ದು, ಅದನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ ಎಂದು ಹೇಳಿದರು. ಸಹಕಾರಿಗಳ ಮಟ್ಟ ಹಾಕಲು ಹುನ್ನಾರ:

ನಾವು ರೈತರಿಗೆ, ಉದ್ಯೋಗಿಗಳಿಗೆ, ನಿವೃತ್ತ ನೌಕರರಿಗೆ ಹೆಚ್ಚಿನ ಬಡ್ಡಿಯಲ್ಲಿ ಸಿದ್ಧಸಿರಿ ಬ್ಯಾಂಕಿನಲ್ಲಿ ಡಿಪಾಜಿಟ್‌ ಮಾಡಿಕೊಳ್ಳುತ್ತಿದ್ದೇವೆ. ಅದನ್ನು ಸಹಿಸಲು ಆಗದೇ ಸಚಿವ ಶಿವಾನಂದ ಪಾಟೀಲ ಅವರು ಸೌಹಾರ್ದಗಳ ಸಹಕಾರಿಗಳ ಮೇಲೆ ಹೊಸ ಕಾನೂನು ತರಲು ಪ್ರಯತ್ನ ಮಾಡಿದ್ದಾರೆ.ಡಿಸಿಸಿ ಬ್ಯಾಂಕಿನಿಂದ ಹೆಚ್ಚಿನ ಬಡ್ಡಿಯೂ ನೀಡುವುದಿಲ್ಲ. ಸಾಲವನ್ನೂ ನೀಡುವುದಿಲ್ಲ. ನಾವು ಹೆಚ್ಚಿನ ಸಾಲ, ಬಡ್ಡಿ ನೀಡುವುದನ್ನು ತಡೆಯಲು, ಸಹಿಸದೇ, ಬಹಳ ತಾಪ ಮಾಡಿಕೊಂಡು ಕಾನೂನು ಪಾಸ್‌ ಮಾಡಿಸಿ ಸೌಹಾರ್ದ ಸಹಕಾರಿಗಳನ್ನು ಮಟ್ಟ ಹಾಕಲು ಹುನ್ನಾರ ನಡೆಸಿದ್ದಾರೆ ಆರೋಪಿಸಿದರು.1008 ಬೆಡ್‌ನ ಆಸ್ಪತ್ರೆ ನಿರ್ಮಾಣದ ಚಿಂತನೆ:

ಬಡವರು, ಸಮಾಜದ ಕಟ್ಟಕಡೆಯ ವ್ಯಕ್ತಿಗೆ, ಕುಟುಂಬಕ್ಕೆ ಕಡಿಮೆ ದರದಲ್ಲಿ ಚಿಕಿತ್ಸೆ ದೊರೆಯಲಿ ಎಂಬ ಸದುದ್ದೇಶದಿಂದ ಲಾಭ, ಹಾನಿಯನ್ನು ಲೆಕ್ಕಿಸದೇ ಆಸ್ಪತ್ರೆ ಹಾಗೂ ಮೆಡಿಕಲ್‌ ಆರಂಭಿಸಲಾಗಿದೆ. ಸಿದ್ದಸಿರಿ ಸಹಕಾರಿಯಿಂದ ಹಾಗೂ ಸಿದ್ದೇಶ್ವರ ಸಂಸ್ಥೆಯಿಂದ ಬರುವ ಲಾಭದಲ್ಲಿ ಲೋಕ ಕಲ್ಯಾಣ ಟ್ರಸ್ಟ್‌ ಮೂಲಕ ಬಡವರ ಸೇವೆ ಮಾಡಲು ಮುಂದಾಗಿದ್ದೇವೆ. ಮುಂಬರುವ ದಿನದಲ್ಲಿ 1008 ಬೆಡ್‌ನ ಆಸ್ಪತ್ರೆ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದ್ದು, ಬೆಂಗಳೂರಿನಲ್ಲಿ ದೊರೆಯುವ ಚಿಕಿತ್ಸೆ ವಿಜಯಪುರ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ದೊರೆಯುವಂತೆ ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಮುಂಬರುವ ದಿನದಲ್ಲಿ ಕ್ಯಾನ್ಸರ್‌, ಹೆರಿಗೆ ಆಸ್ಪತ್ರೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ 11 ಮಹಡಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.

ಶಿಕ್ಷಣ ಸಂಸ್ಥೆ, ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಿ ಆರಂಭಿಸಲು ಹಲವು ಜನ ಧಾನಿಗಳು ಭೂಮಿ ಧಾನ ಮಾಡಿದ್ದಾರೆ. ಬಡ ರೋಗಿಗಳಿಗೆ ರಾತ್ರಿ ವೇಳೆಯಲ್ಲಿ ಔಷಧ ಅನುಕೂಲಕ್ಕಾಗಿ ಈ ಮೆಡಿಕಲ್‌ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಆರಂಭಿಸಲಾಗಿದೆ. ಇಂಡಿಯ ಜನರು ಚಿಕಿತ್ಸೆಗಾಗಿ ಸೋಲಾಪೂರ, ಮಿರಜ ಹಾಗೂ ಬೆಂಗಳೂರಿಗೆ ಹೋಗುತ್ತಿದ್ದಾರೆ. ಹೀಗಾಗಿ ಇಂಡಿಯಲ್ಲಿಯೇ ಸುಸಜ್ಜಿತ ಆಸ್ಪತ್ರೆ ಮಾಡುವಂತೆ ಇಂಡಿಯ ಜನರ ಬೇಡಿಕೆಯನ್ನು ಇಟ್ಟಿದ್ದು, ಮುಂಬರುವ ದಿನದಲ್ಲಿ ಇಂಡಿಯಲ್ಲಿ ಆಸ್ಪತ್ರೆ ಆರಂಭಿಸಲು ಚಿಂತನೆ ಮಾಡಲಾಗುತ್ತದೆ ಎಂದು ಹೇಳಿದರು.

ಮಾಜಿ ಶಾಸಕ ಡಾ.ಸಾರ್ವಭೌಮ ಬಗಲಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಕೇವಲ ರಾಜಕಾರಣಿಯಾಗಿ ಸೇವೆ ಮಾಡದೆ, ಬಡವರಿಗಾಗಿ ಹಲವು ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇತರೆ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಹಣ ಗಳಿಸಿ ಸಂಸ್ಥೆ ಬೆಳೆಸುವುದು ಬೇಡ ಎಂದು ತೀರ್ಮಾನಿಸಿ ಬಡವರಿಗಾಗಿ ಶಿಕ್ಷಣ ಸಂಸ್ಥೆ, ಆಸ್ಪತ್ರೆ, ಮೆಡಿಕಲ್‌ ಹಾಗೂ ಗೋ ಸೇವೆಗಾಗಿ ಗೋಶಾಲೆಗಳನ್ನು ತೆರೆಯುವುದರ ಮೂಲಕ ನಾಡಿನಲ್ಲಿ ಸಮಾಜಮುಖಿ ಕಾರ್ಯಗಳಿಂದ ಹೆಸರು ಗಳಿಸುತ್ತಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ, ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ ಮಾತನಾಡಿದರು. ಗೋಳಸಾರ ಮಠದ ಅಭಿನವ ಪುಂಡಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು.ತಾಲೂಕ ವೈದ್ಯಾಧಿಕಾರಿ ಡಾ.ಅರ್ಚನಾ ಕುಲಕರ್ಣಿ, ಡಾ.ಎಂ.ಜಿ.ಪಾಟೀಲ, ರಮೇಶ ಗುತ್ತೇದಾರ, ಜಗದೀಶ ಕ್ಷತ್ರಿ,ಸಿ.ಎಂ.ಶಹಾ ವೇದಿಕೆ ಮೇಲೆ ಇದ್ದರು.

ಬತ್ತುಸಾಹುಕಾರ ಹಾವಳಗಿ, ಮುತ್ತು ದೇಸಾಯಿ, ಸುಭಾಷ ಹಿಟ್ನಳ್ಳಿ, ಶೀಲವಂತ ಉಮರಾಣಿ, ಸಿದ್ದಪ್ಪ ಗುನ್ನಾಪೂರ,ರವಿಗೌಡ ಪಾಟೀಲ, ಗುರುಗೌಡ ಬಿರಾದಾರ,ಚಿದಾನಂದ ಗಿಣ್ಣಿ ,ವಿರೂಪಾಕ್ಷಯ್ಯ ಹಿರೇಮಠ,ಚನ್ನುಗೌಡ ಪಾಟೀಲ, ಅನೀಲಗೌಡ ಬಿರಾದಾರ, ಶ್ರೀಧರ ಕ್ಷತ್ರಿ, ರಾಮಸಿಂಗ ಕನ್ನೊಳ್ಳಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.---

ಅಪ್ಪ-ಮಗನ ವಿರೋಧ ವಾಗ್ದಾಳಿರಾಜ್ಯ ಬಿಜೆಪಿಯಲ್ಲಿ ಅಪ್ಪ-ಮಗನ ಕಾರುಬಾರು ಜೋರ ನಡೆದಿದೆ. ಲೋಕಸಭಾ ಚುನಾವಣೆ ಮುಗಿದ ಮೇಲೆ ಬೆತಾಳನಂತೆ ಬೆನ್ನುಹತ್ತಿ ಅಪ್ಪ-ಮಗನ ಸೊಕ್ಕ ಮುರಿಲು ತಯಾರಿ ಮಾಡಲಾಗುತ್ತದೆ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಟಾಂಗ್ ನೀಡಿದರು.

Share this article