ಹೇಮಾವತಿ ಎಡದಂಡೆಯ ಮುಖ್ಯ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಸಚಿವರಿಂದ ಭೂಮಿ ಪೂಜೆ

KannadaprabhaNewsNetwork |  
Published : Jun 23, 2025, 11:48 PM IST
23ಕೆಎಂಎನ್ ಡಿ20 | Kannada Prabha

ಸಾರಾಂಶ

ಹೇಮಾವತಿ ಎಡದಂಡೆ ನಾಲೆಯ 224 ಕಿ.ಮೀ.ನಲ್ಲಿ ಈ ಮೊದಲು ಗೊರೂರಿನಿಂದ 3 ಸಾವಿರ ಕ್ಯುಸೆಕ್ ನೀರು ಬರುತ್ತಿತ್ತು. ಇದರಲ್ಲಿ ಚನ್ನರಾಯಪಟ್ಟಣ ತಾಲೂಕಿನ ಕೆಲ ಭಾಗ ಸೇರಿದಂತೆ ಕೆ.ಆರ್.ಪೇಟೆ, ಪಾಂಡವಪುರ ನಾಗಮಂಗಲ ಮತ್ತು ಬಸರಾಳು ಭಾಗಕ್ಕೆ ಈ ನೀರು ಹರಿದು ಬರುತ್ತಿತ್ತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಕೊನೇ ಭಾಗದ ಎಲ್ಲಾ ಕೆರೆ ಕಟ್ಟೆಗಳಿಗೆ ಸಮರ್ಪಕ ನೀರು ತುಂಬಿಸಲು ಹೇಮಾವತಿ ಎಡದಂಡೆ ನಾಲೆಯ ಮುಖ್ಯ ಕಾಲುವೆಗಳ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಬಸವೇಶ್ವರನಗರ ಸಮೀಪ 50 ಕೋಟಿ ರು. ವೆಚ್ಚದಲ್ಲಿ ಹೇಮಾವತಿ ಎಡದಂಡೆ ನಾಲೆಯ ಮುಖ್ಯ ಕಾಲುವೆಗಳ ಆಧುನೀಕರಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಈ ಕಾಮಗಾರಿ ಪೂರ್ಣಗೊಂಡ ಬಳಿಕ ಹೊಣಕೆರೆ ಮತ್ತು ದೇವಲಾಪುರ ಹೋಬಳಿಯ ಬಹುತೇಕ ಕೆರೆ ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿ ಜನ ಜಾನುವಾರುಗಳಿಗೆ ಅನುಕೂಲವಾಗುತ್ತದೆ ಎಂದರು.

ಹೇಮಾವತಿ ಎಡದಂಡೆ ನಾಲೆಯ 224 ಕಿ.ಮೀ.ನಲ್ಲಿ ಈ ಮೊದಲು ಗೊರೂರಿನಿಂದ 3 ಸಾವಿರ ಕ್ಯುಸೆಕ್ ನೀರು ಬರುತ್ತಿತ್ತು. ಇದರಲ್ಲಿ ಚನ್ನರಾಯಪಟ್ಟಣ ತಾಲೂಕಿನ ಕೆಲ ಭಾಗ ಸೇರಿದಂತೆ ಕೆ.ಆರ್.ಪೇಟೆ, ಪಾಂಡವಪುರ ನಾಗಮಂಗಲ ಮತ್ತು ಬಸರಾಳು ಭಾಗಕ್ಕೆ ಈ ನೀರು ಹರಿದು ಬರುತ್ತಿತ್ತು ಎಂದರು.

ತುಮಕೂರಿಗೆ ಹೋಗುವ ಎನ್‌ಬಿಸಿ ನಾಲೆಯಲ್ಲಿ ತಿಪಟೂರು, ತುರುವೇಕೆರೆ ಮಾರ್ಗವಾಗಿ ತಾಲೂಕಿನ ಬೆಳ್ಳೂರು, ದೇವಲಾಪುರ ಮತ್ತು ಕಸಬಾ ಹೋಬಳಿಯ ಕೆಲ ಭಾಗಕ್ಕೆ ಕಡಿಮೆ ಪ್ರಮಾಣದ ನೀರುಬರುತ್ತಿತ್ತು ಎಂದರು.

ಡಿ.ದೇವರಾಜ ಅರಸು ಅವರ ಕಾಲದಲ್ಲಿ ಆರಂಭಗೊಂಡಿದ್ದ ಈ ಕಾಲುವೆಗಳಲ್ಲಿ 3 ಸಾವಿರ ಕ್ಯುಸೆಕ್ ನಿಂದ 4.5 ಸಾವಿರ ಕ್ಯುಸೆಕ್ ನೀರು ತರಲು ಹಾಸನದಿಂದ ಬಿಟ್ಟರೆ ಹೆಚ್ಚು ನೀರು ಹರಿಯುತ್ತದೆಂಬ ಕಾರಣಕ್ಕೆ ಕಾಲುವೆ ಅಗಲೀಕರಣಕ್ಕೆ ಬಹಳವರ್ಷ ತಡೆದಿದ್ದರು. 2013 ರಿಂದ 2018ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇದನ್ನೆಲ್ಲಾ ಸಮೀಕ್ಷೆ ನಡೆಸಿ ಗೊರೂರಿನಿಂದ ಚನ್ನರಾಯಪಟ್ಟಣದ ವರೆಗೆ 70 ಕಿ.ಮೀ. ಉದ್ದದ ನಾಲಾ ಅಗಲೀಕರಣ ಮಾಡಿ 3ರಿಂದ 4.5ಸಾವಿರ ಕ್ಯುಸೆಕ್ ನೀರು ಬಿಡುವಂತೆ ಮಾಡಲಾಯಿತು ಎಂದರು.

ನಾನು ಶಾಸಕನಾಗಿದ್ದ ಅವಧಿಯಲ್ಲಿ ಚನ್ನರಾಯಪಟ್ಟಣದಿಂದ ನಾಗಮಂಗಲದ ವರೆಗೆ 150 ಕಿ.ಮೀ. ಮುಖ್ಯ ಕಾಲುವೆಯನ್ನು ಆಧುನೀಕರಣ ಮಾಡಿದ್ದರಿಂದ ತಾಲೂಕಿನ ಕೊನೆಭಾಗದ ದೇವಲಾಪುರ ಮತ್ತು ಬಿಂಡೇನಹಳ್ಳಿ ಕೆರೆಗಳಿಗೆ ಸ್ವಲ್ಪ ನೀರು ಬರುವಂತಾಯಿತು. ಇದಕ್ಕಿಂತ ಮೊದಲು ತಾಲೂಕಿನ ಒಂದು ಕೆರೆಗೆ ಹೇಮಾವತಿ ನೀರು ತುಂಬಿಸಲು ಬಹಳ ಕಷ್ಟಪಡಬೇಕಿತ್ತು ಎಂದರು.

ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ತಿಪಟೂರು, ತುರುವೇಕೆರೆ ತಾಲೂಕಿನಿಂದ ಹಾಯ್ದು ನಾಗಮಂಗಲ ತಾಲೂಕಿನ ಎನ್‌ಬಿಸಿ ನಾಲಾ ಆಧುನೀಕರಣ ಕಾಮಗಾರಿಗೆ 600 ಕೋಟಿ ರು. ಹಣ ಮಂಜೂರು ಮಾಡಿಸಲಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಕಸಬಾ ಹೋಬಳಿಯ ಮುಳಕಟ್ಟೆವರೆಗೂ ಸಮರ್ಪಕವಾಗಿ ನೀರು ಹರಿದುಬರಲಿದೆ ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮಾಜಿ ಅಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಮನ್ಮುಲ್ ನಿರ್ದೇಶಕ ಅಪ್ಪಾಜಿಗೌಡ, ಮುಖಂಡರಾದ ಕೊಣನೂರು ಹನುಮಂತು ಸೇರಿದಂತೆ ಹೇಮಾವತಿ ಇಲಾಖೆಯ ಅಧಿಕಾರಿಗಳು ಇದ್ದರು.

PREV

Recommended Stories

ಕರಾವಳಿ, ಮಲೆನಾಡದಲ್ಲಿ ಗಾಳಿಸಹಿತ ಜಡಿ ಮಳೆ : ಶಾಲೆಗಳಿಗೆ ಇಂದು ರಜೆ
ಆರೆಸ್ಸೆಸ್‌ ಭಾರತದ ತಾಲಿಬಾನ್‌: ಹರಿಪ್ರಸಾದ್ ವಿವಾದ