ಹಾವೇರಿ: ಮುಖ್ಯಮಂತ್ರಿಗಳ ಬಳಿ ರೈತರ ನಿಯೋಗ ಕರೆದೊಯ್ದು ಬರ ಪರಿಹಾರ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಭರವಸೆ ಮೇರೆಗೆ ಜಿಲ್ಲಾಡಳಿತ ಭವನದ ಎದುರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ರೈತರು ಅಂತ್ಯಗೊಳಿಸಿದರು.ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರೈತರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು.ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿಯೊಂದಿಗೆ ರೈತರ ಸಭೆ ಆಯೋಜಿಸಿ, ಬೇಡಿಕೆ ಈಡೇರಿಕೆ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು. ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹೋರಾಟ ಅಂತ್ಯಗೊಳಿಸಿ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ರೈತರು ಹೋರಾಟ ಅಂತ್ಯಗೊಳಿಸುವುದಾಗಿ ನಿರ್ಣಯ ಪ್ರಕಟಿಸಿದರು.
ಬರ ಪರಿಹಾರವಾಗಿ ಸರ್ಕಾರ ₹2 ಸಾವಿರ ಪರಿಹಾರ ನೀಡಿದ್ದಕ್ಕೆ ತಿರುಗೇಟು ನೀಡಿರುವ ಜಿಲ್ಲೆಯ ರೈತರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ₹2100 ಮೊತ್ತದ ಚೆಕ್ ಬರೆದು ಪೋಸ್ಟ್ ಮಾಡಿದ್ದಾರೆ.
ಇಲ್ಲಿಯ ಜಿಲ್ಲಾಡಳಿತ ಭವನದ ಎದುರು ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಜ. 23ರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ನೂರಾರು ರೈತರು, ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್ ಬರೆದು ತಿರುಗೇಟು ನೀಡಿದರು. ಎಕರೆಗೆ ₹25 ಸಾವಿರ ಬರ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರು, ಪರಿಹಾರ ನೀಡದಿದ್ದರೆ ಜ. 26ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣಕ್ಕೆ ಅವಕಾಶ ಕೊಡುವುದಿಲ್ಲ, ರೈತರೇ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಸವಾಲು ಹಾಕಿದರು.ಇದರಿಂದ ಎಚ್ಚೆತ್ತ ಜಿಲ್ಲೆಯ ಶಾಸಕರು ರೈತರೊಂದಿಗೆ ಸಂಧಾನ ಸಭೆ ನಡೆಸಿದರು. ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತುಕತೆ ನಡೆಸಿದರು. ಆದರೆ, ರೈತರು ಸಂಧಾನಕ್ಕೆ ಮಣಿಯದೇ, ಜಿಲ್ಲಾಧಿಕಾರಿ ಧ್ವಜಾರೋಹಣ ನೆರವೇರಿಸಲಿ ಇಲ್ಲವೇ ಜಿಲ್ಲೆಯ ಶಾಸಕರು ಧ್ವಜಾರೋಹಣ ಮಾಡಿದರೆ ಆಕ್ಷೇಪವಿಲ್ಲ. ಆದರೆ, ರೈತರ ಬಗ್ಗೆ ಕಾಳಜಿಯಿಲ್ಲದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಧ್ವಜಾರೋಹಣ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.
ಈ ವರ್ಷ ಬರಗಾಲ ಇರುವುದರಿಂದ ರೈತರಿಗೆ ತೊಂದರೆಯಾಗದಂತೆ ತೋಟಗಾರಿಕೆ ಹಾಗೂ ಕೃಷಿಗೆ ಸ್ಪ್ರಿಂಕ್ಲರ್ ಸಹಾಯಧನ ನೀಡಲು ಕಳೆದ ಅಧಿವೇಶನದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಕೃಷಿ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕಾನೂನು ತೊಡಕು ಇರುವ ಕಾರಣ ಪ್ರಾದೇಶಿಕ ಕಚೇರಿ ಆರಂಭಿಸಲು ಮನವಿ ಮಾಡಿಕೊಳ್ಳಲಾಗಿದೆ. ಧಾರವಾಡ ಡಿಸಿಸಿ ಬ್ಯಾಂಕಿನಿಂದ ಠರಾವು ಮಾಡಿ ಪ್ರಸ್ತಾವನೆ ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ಆ ಕಾರ್ಯವೂ ಆಗಲಿದೆ. ಒಟ್ಟಾರೆ ರೈತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ರೈತರ ಸಮಸ್ಯೆಗಳಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು. ಬಡವರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಲು ಹಿಂದೇಟು ಹಾಕುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು. ಧರಣಿ ಕೈಬಿಡಿ ಎಂದು ಮನವಿ ಮಾಡಿಕೊಂಡರು. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಲು ಮುಖ್ಯಮಂತ್ರಿ ಜತೆ ನಾವೆಲ್ಲ ಚರ್ಚಿಸುತ್ತೇವೆ. ವಿದ್ಯುತ್ ಮತ್ತು ಹನಿ ನೀರಾವರಿ ಸೌಲಭ್ಯ ಸೇರಿದಂತೆ ರೈತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಪರಿಹರಿಸಲಾಗುವುದು. ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡರು.