ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಘುಮೂರ್ತಿ ಅವರ ಪುರಪ್ರವೇಶಕ್ಕೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಕಾಂತರಾಜ್, ಚಿತ್ರದುರ್ಗ ಪ್ರವೇಶ ಮಾಡುವ ರಘುಮೂರ್ತಿ ಅವರನ್ನು ಚಳ್ಳಕೆರೆ ವೃತ್ತದಲ್ಲಿ ಸ್ವಾಗತಿಸಿ ಮೆರವಣಿಗೆ ಮೂಲಕ ಕರೆ ತರಲಾಗುವುದು. ಪಂಚಾಚಾರ್ಯ ಕಲ್ಯಾಣ ಮಂಟಪ ಮುಂಭಾಗದಿಂದ ಸಾಗುವ ಮೆರವಣಿಗೆ ಸ್ಟೇಡಿಯಂ ಕ್ರಾಸ್, ಜಿಲ್ಲಾ ಆಸ್ಪತ್ರೆ ಮಾರ್ಗವಾಗಿ ಮದಕರಿನಾಯಕ ಪ್ರತಿಮೆ ಮುಂಭಾಗದ ಸರ್ಕಲ್ ತಲುಪಲಿದೆ.
ವಾಲ್ಮೀಕಿ ಸಮುದಾಯ ಭವನದ ಮುಂಭಾಗ ರಚಿಸಲಾದ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಹಿಂದೊಮ್ಮೆ ನಾಯಕ ಸಮಾಜದ ತಿಪ್ಪೇಸ್ವಾಮಿ ಸಚಿವರಾಗಿದ್ದರು. 30 ವರ್ಷದ ನಂತರ ಸಮುದಾಯದ ಟಿ.ರಘುಮೂರ್ತಿ ಅವರಿಗೆ ಅವಕಾಶ ಒದಗಿ ಬಂದಿದೆ. ಸಾರ್ವಜನಿಕರು ಹಾಗೂ ಅನೇಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಗುವುದು. ಯುವಕರ ಒತ್ತಾಯದ ಮೇರೆಗೆ ಸ್ಟಾಡಿಂಗ್ ಡಿಜೆ ಕೂಡಾ ಇರಲಿದೆ. ಸಮುದಾಯದ ಜನ ಪಕ್ಷಾತೀತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ನಿವೃತ್ತ ಪ್ರಾಚಾರ್ಯ ಪ್ರೊ.ಗುಡದೇಶ್ವರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಟಿ.ರಘುಮೂರ್ತಿ ಮಾಡಿದ್ದಾರೆ. ಅವರನ್ನು ಜಾತ್ಯತೀತವಾಗಿ ಜಿಲ್ಲೆಯ ಜನ ಒಪ್ಪಿಕೊಳ್ಳುತ್ತಾರೆ. ಚಳ್ಳಕೆರೆ ಮಾದರಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಆಗಬೇಕು ಎನ್ನುವ ಅಭಿಲಾಷೆ ಇದೆ. ಪಕ್ಷಾತೀತವಾಗಿ ಅವರ ಪುರಪ್ರವೇಶ ಕಾರ್ಯಕ್ರಮ ಮಾಡಬೇಕು ಎಂದು ಸಮಾಜ ತೀರ್ಮಾನಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯ ದೀಪಕ್, ಅಹೋಬಲ ಟಿವಿಎಸ್ ಮಾಲಿಕ ಪಿ.ವಿ.ಅರುಣ್, ಮುಖಂಡ ಸೋಮೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.