ಸೋಮಣ್ಣ ಅವರು ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಬಸವ ಜಯಂತಿ ಆಚರಣೆಗೆ ಕಾರಣರಾದರು ಎಂದು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಕೇಂದ್ರ ಸಚಿವ ವಿ.ಸೋಮಣ್ಣ ಅವರು ಉತ್ತಮ ಜನಪರ ಕೆಲಸಗಾರರು, ಹಿಡಿದ ಕೆಲಸವನ್ನು ಮಾಡಿ ಮುಗಿಸುವ ಛಲಗಾರ. ಅವರು ರೈಲ್ವೆ ಸಚಿವರಾದ ನಂತರ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಾಗುತ್ತಿವೆ. ನೆನೆಗುದಿಗೆ ಬಿದ್ದಿದ್ದ ಕೆಲಸಗಳಿಗೆ ಚಾಲನೆ ದೊರಕಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ರೈಲು ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮೋದನೆ ನೀಡಿದ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಅಭಿಮಾನಿ ಬಳಗ, ಜಿಲ್ಲಾಕನ್ನಡ ಸೇನೆ, ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಿಹಿ ವಿತರಿಸಿ ಸಂಭ್ರಮ ಆಚರಿಸುವ ಸಮಾರಂಭದಲ್ಲಿ ಮಾತನಾಡಿದರು.ಸೋಮಣ್ಣ ಅವರು ಕೇಂದ್ರ ಸಚಿವರಾದ ನಂತರ ಇದೇ ಮೊದಲ ಬಾರಿಗೆ ಸಂಸತ್ತಿನಲ್ಲಿ ಬಸವ ಜಯಂತಿ ಆಚರಣೆಗೆ ಕಾರಣರಾದರು ಎಂದು ಅಭಿನಂದಿಸಿದರು.ರೈಲು ನಿಲ್ದಾಣವನ್ನು ಸಿದ್ಧಗಂಗಾ ಮಠದ ಮಾದರಿಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲು ಹಾಗೂ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ನಾಮಕರಣ ಮಾಡಲು ಸಚಿವ ಸೋಮಣ್ಣ ಕಾಳಜಿ ವಹಿಸಿದ್ದಾರೆ ಎಂದು ಹೇಳಿದ ಸಿದ್ಧಲಿಂಗ ಸ್ವಾಮೀಜಿಗಳು, ಸೋಮಣ್ಣ ಅವರು ಹಿಡಿದ ಕೆಲಸವನ್ನು ಮಾಡಿ ಮುಗಿಸುವುದರಲ್ಲಿ ಹೆಸರಾದವರು, ಇವರು ರೈಲ್ವೆ ಮಂತ್ರಿಯಾದ ಮೇಲೆ ಜಿಲ್ಲೆಯಲ್ಲಿ ನೂರಾರು ಕೋಟಿ ರು.ಗಳ ಅಭಿವೃದ್ಧಿ ಕಾಮಗಾರಿಗಳಾಗುತ್ತಿವೆ. ಅತ್ಯಗತ್ಯವಾಗಿದ್ದ ರೈಲ್ವೆ ಅಂಡರ್‌ಪಾಸ್, ಮೇಲ್ಸೇತುವೆಗಳನ್ನು ಆದ್ಯತೆ ಮೇಲೆ ಮಾಡುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲು ಮಾರ್ಗ ನಿರ್ಮಾಣ ಯೋಜನೆಯ ಕಾಮಗಾರಿಗೆ ವೇಗ ದೊರಕಿಸಿದ್ದಾರೆ. ಹೆಚ್ಚು ಜನರು ರೈಲು ಪ್ರಯಾಣ ಅವಲಂಬಿಸಿದ್ದಾರೆ. ಇಲಾಖೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಒದಗಿಸಲಿ ಎಂದು ಸ್ವಾಮೀಜಿ ಹೇಳಿದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸೋಮಣ್ಣ ಅವರು ತುಮಕೂರು ಕ್ಷೇತ್ರದ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ರೈಲ್ವೆ ನಿಲ್ದಾಣ ಅಭಿವೃದ್ಧಿ, ಸ್ವಾಮೀಜಿಗಳ ಹೆಸರಿಡುವುದು ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡಿದ ತುಮಕೂರು ಕ್ಷೇತ್ರದ ಜನರ ಋಣ ತೀರಿಸುವ ಪ್ರಯತ್ನ ಮಾಡಿದ್ದಾರೆ ಎಂದರು.ಸಾಧಾರಣ ನಿಲ್ದಾಣವಾಗಿ ಅಭಿವೃದ್ಧಿ ಆಗಲಿದ್ದ ತುಮಕೂರು ರೈಲ್ವೆ ನಿಲ್ದಾಣವನ್ನು ಸುಮಾರು 87 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತವಾಗಿ, ಸಿದ್ಧಗಂಗಾ ಮಠ ಹೋಲಿಕೆಯ ಮಾದರಿಯಲ್ಲಿ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಅವರು, ನಿಲ್ದಾಣಕ್ಕೆ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ಎಲ್ಲಾ ಸಂಘಸಂಸ್ಥೆಗಳು, ಸಾರ್ವಜನಿಕರು ಚಳವಳಿ ರೂಪದ ಮನವಿ ಮಾಡಿದ್ದರು. ಸಚಿವ ಸೋಮಣ್ಣನವರ ಪ್ರಯತ್ನದಿಂದ ಆಶಯ ಈಡೇರಿದೆ. ರೈಲು ಪ್ರಯಾಣಿಕರ ಮೇಲೆ ಸದಾ ಡಾ.ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಇರಲಿ ಎಂದು ಆಶಿಸಿದರು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ರೈಲ್ವೆ ನಿಲ್ದಾಣವನ್ನು ಸುಸಜ್ಜಿತವಾಗಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಿ, ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಸಹಕರಿಸಿರುವ ಸಚಿವ ವಿ.ಸೋಮಣ್ಣ ಅವರಿಗೆ ಅಭಿನಂದನೆಗಳು. ಪುನರ್ ನಿರ್ಮಾಣವಾಗುವ ರೈಲ್ವೆ ನಿಲ್ದಾಣದಲ್ಲಿ ಡಾ.ಶಿವಕುಮಾರ ಸ್ವಾಮೀಜಿಗಳ ಪುತ್ಥಳಿ, ಗ್ರಂಥಾಲಯ ಸ್ಥಾಪಿಸಿ ಶ್ರೀಗಳಿಗೆ ಸಂಬಂಧಿಸಿದ, ಅವರ ಸೇವಾ ಸಾಧನೆ ಪರಿಚಯಿಸುವ ಕೃತಿಗಳು ಹಾಗೂ ಅವರ ವಿಶೇಷ ಫೋಟೊಗಳ ಪ್ರದರ್ಶನ ಮಾಡಿ ಮುಂದಿನ ತಲೆಮಾರಿನವರಿಗೆ ಶ್ರೀಗಳ ಸೇವೆಯನ್ನು ಪರಿಚಯಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ಸಿದ್ಧಗಂಗಾ ಐಟಿಐ ಕಾಲೇಜು ಪ್ರಾಚಾರ್ಯಎನ್.ಸುನಿಲ್, ಎಲ್‌ಐಸಿ ಅಧಿಕಾರಿ ದೊಡ್ಡರಾಜು, ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಪ್ರೊ.ಕರಿಯಣ್ಣ, ಮುಖಂಡರಾದ ಆರ್.ಎನ್.ವೆಂಕಟಾಚಲ, ಸಂತೋಷ್, ಉದಯಕುಮಾರ್, ನಂದಿ ಪ್ರಭಾಕರ್, ರಮೇಶ್ ಬಾಬು, ಲಕ್ಷ್ಮಿನಾರಾಯಣ, ಕೊಪ್ಪಲ್ ನಾಗರಾಜು, ನಟರಾಜಶೆಟ್ಟರು, ಗುರು ರಾಘವೇಂದ್ರ, ಗೋಲ್ದ್ ಮಧು, ಟಿ.ಕೆ.ಆನಂದ್, ಲಕ್ಷ್ಮೀಕಾಂತರಾಜೇ ಅರಸು, ವಿನಯ್‌ಕುಮಾರ್, ಅತ್ತಿ ಉಮೇಶ್, ಶಾಂತಕುಮಾರ್, ರಾಮರಾಜು ಮೊದಲಾದವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.