ಬಿಎಸ್ಎಸ್‌ಕೆ ಹರಾಜು ತಡೆದು, ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ವಹಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸಲಹೆ ನೀಡಿದ್ದಾರೆ.
ಬೆಳಗಾವಿ, ಸುವರ್ಣಸೌಧ
ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಸಾಲದ ಹೊರೆಯಿಂದ ಸ್ಧಗಿತಗೊಂಡಿದ್ದು, ಹಲವು ಕಾರ್ಮಿಕರ ಭವಿಷ್ಯ ಅಂಧಕಾರದಲ್ಲಿದೆ. ಪ್ರಸ್ತುತ ನಡೆದಿರುವ ಹರಾಜಿಗೆ ತಡೆ ನೀಡಿ, ಪುನಶ್ಚೇತನಕ್ಕೆ ಕ್ರಮ ವಹಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸಲಹೆ ನೀಡಿದ್ದಾರೆ.
ಅವರು ಸುವರ್ಣಸೌಧದ 318ನೇ ಕೊಠಡಿಯಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್, ಪೌರಾಡಳಿತ ಸಚಿವ ರಹೀಮ್ ಖಾನ್ ಹಾಗೂ ಜಿಲ್ಲೆಯ ಜನಪ್ರತಿನಿಧಿ ಗಳು ಮತ್ತು ಬ್ಯಾಂಕ್, ಕಾರ್ಮಿಕ ಸಂಘದ ನಾಯಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಕಾರ್ಖಾನೆಯೂ ಉಳಿಯಬೇಕು, ಕಾರ್ಮಿಕರೂ ಉಳಿಯ ಬೇಕು, ಕಾರ್ಖಾನೆಗೆ ಸಾಲ ನೀಡಿರುವ ಬ್ಯಾಂಕ್ ಗಳೂ ಉಳಿಯಬೇಕು ಈ ರೀತಿ ಒಂದು ಸೂತ್ರ ರೂಪಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು
25 ಸಾವಿರ ರೈತ ಸದಸ್ಯರ ಭವಿಷ್ಯ ಈ ಕಾರ್ಖಾನೆಯ ಮೇಲಿದ್ದು, ಈ ಸಭೆಯ ನಂತರ ಕಾರ್ಖಾನೆಯನ್ನು 30 ವರ್ಷಗಳ ಗುತ್ತಿಗೆಗೆ ನೀಡಿ ಪುನಾರಂಭ ಮಾಡಿಸುವ ಬಗ್ಗೆ ಚಿಂತಿಸಬಹುದು. ಕಾರ್ಖಾನೆಯನ್ನು ಗುತ್ತಿಗೆಗೆ ನೀಡಿದರೆ ಉತ್ತಮವೋ ಅಥವಾ ಸಕ್ಕರೆ ಕಾರ್ಖಾನೆ ಮುಂದುವರಿಸುವ ಷರತ್ತಿನೊಂದಿಗೆ ಬಹಿರಂಗ ಹರಾಜು ಮಾಡುವುದು ಉತ್ತಮವೋ ಎಂಬ ಬಗ್ಗೆ ನಂತರ ಚರ್ಚಿಸೋಣ ಎಂದು ಸಲಹೆ ಮಾಡಿದರು.
ತಾವೂ ಕೂಡ 2009ರವರೆಗೆ 10 ವರ್ಷಗಳ ಕಾಲ ಈ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿದ್ದನ್ನು ಸ್ಮರಿಸಿದ ಈಶ್ವರ ಖಂಡ್ರೆ, ಆಗ ಕಾರ್ಖಾನೆಯ ಮೇಲೆ 28 ಕೋಟಿ ರು. ಸಾಲ ಇತ್ತು, ಆದರೆ 56 ಕೋಟಿ ರೂ. ಸಕ್ಕರೆ ಮತ್ತು ಮೊಲಾಸಿಸ್ ಇತ್ತು. ಸಾಲಕ್ಕಿಂತ ಹೆಚ್ಚಿನ ಮೌಲ್ಯದ ಉತ್ಪನ್ನ ಕಾರ್ಖಾನೆಯಲ್ಲಿತ್ತು. ನಂತರ ಲಾಭದಲ್ಲಿದ್ದ ಕಾರ್ಖಾನೆ ನಷ್ಟ ಅನುಭವಿಸಿ, ಸಾಲದ ಸುಳಿಯಲ್ಲಿ ಸಿಲುಕಿದೆ ಎಂದರು.
2015-16ರಲ್ಲಿ ಕಬ್ಬಿದ್ದರೂ ಕಬ್ಬು ನುರಿದಿದ್ದು ಮಾತ್ರ 67659 ಟನ್, ಆದರೆ ತಾವು ಅಧ್ಯಕ್ಷರಾಗಿದ್ದಾಗ 6.5 ಲಕ್ಷ ಟನ್ ಕಬ್ಬು ನುರಿಯಲಾಗಿತ್ತು, ರಿಕವರಿ ದರ 10.8 ರಷ್ಟಿತ್ತು. ಆದರೆ ನಂತರ ರಿಕವರಿ ಪ್ರಮಾಣ ಶೇ.5ಕ್ಕೆ ಕುಸಿಯಿತು. ಅಸಮರ್ಪಕ ಆಡಳಿತದಿಂದ ಕಾರ್ಖಾನೆ ನಷ್ಟ ಅನುಭವಿಸಿದೆ. ಸಂಬಳ ಕೊಡಲಾರದ ಸ್ಥಿತಿ ತಲುಪಿದೆ ಎಂದು ವರ್ಷವಾರು ಅಂಕಿ ಅಂಶ ನೀಡಿದರು.
ಈಗ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆಗೆ ಹಣ ಕೊಡಿಸುತ್ತಿಲ್ಲ ಎನ್ನುತ್ತಾರೆ. ಆಡಳಿತದ ವೈಫಲ್ಯದಿಂದ ನಷ್ಟ ಅನುಭವಿಸಿರುವ ಕಾರ್ಖಾನೆಗೆ ಯಾವುದೇ ಸರ್ಕಾರ ಬಂದಾಗಲೂ, ಸಾರ್ವಜನಿಕರ ತೆರಿಗೆಯ ಹಣ ಕೊಡಲು ಆಗುವುದಿಲ್ಲ ಎಂದು ವಿವರಿಸಿದರು.
ಸಭೆಯಲ್ಲಿ ಶಾಸಕರುಗಳಾದ ಡಾ. ಶೈಲೇಂದ್ರ ಬೆಲ್ದಾಳೆ, ಶರಣು ಸಲಗರ, ಸಿದ್ದು ಪಾಟೀಲ್, ಭೀಮರಾವ್ ಪಾಟೀಲ್, ಚಂದ್ರಶೇಖರ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಬಿಎಸ್.ಎಸ್. ಕೆ ಅಧ್ಯಕ್ಷ ಸುಭಾಷ ಕಲ್ಲೂರ್, ಮತ್ತಿತರರು ಪಾಲ್ಗೊಂಡಿದ್ದರು.
ಒಟಿಎಸ್ ಮಾಡಲು ಡಿಸಿಗೆ ಸೂಚನೆ
ಬೀದರ್ ಸಕ್ಕರೆ ಕಾರ್ಖಾನೆ ಡಿಸಿಸಿ ಬ್ಯಾಂಕ್ ನಿಂದ ₹115 ಕೋಟಿ ಸಾಲ ಪಡೆದಿದ್ದು ಬಡ್ಡಿ ಸಹಿತ 237 ಕೋಟಿ ರು. ಸಾಲ ಹೊಂದಿದೆ. ಇದರ ಜೊತೆಗೆ ಅಪೆಕ್ಸ್ ಬ್ಯಾಂಕ್ ಗೆ 110 ಕೋಟಿ ರು. ಬಾಕಿ ಉಳಿಸಿಕೊಂಡಿದ್ದು, ಒಟ್ಟು ₹406 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಹೀಗಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಾಲ ನೀಡಿರುವ ಎಲ್ಲ ಬ್ಯಾಂಕ್ ಗಳ ಉನ್ನತಾಧಿಕಾರಿಗಳು ಮತ್ತು ಕಾರ್ಖಾನೆ ಆಡಳಿತ ಮಂಡಳಿ ಸಭೆ ಕರೆದು, ಒನ್ ಟೈಮ್ ಸೆಟಲ್ಮೆಂಟ್ ಒಟಿಎಸ್ ಮಾಡುವ ಬಗ್ಗೆ ನಿರ್ಣಯ ಮಾಡಿ, ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವ ಖಂಡ್ರೆ ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.