ಬಳ್ಳಾರಿ: ಕೆಕೆಆರ್‌ಟಿಸಿಯ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಕೆಕೆಆರ್‌ಟಿಸಿಯಿಂದ ಯಾವೊಬ್ಬ ಅಕಾರಿಗಳು ಹಾಜರಾಗದಿರುವುದನ್ನು ಕಂಡು ಗರಂ ಆದ ಸಚಿವರು, ವಿಭಾಗೀಯ ನಿಯಂತ್ರಣಾಧಿಕಾರಿ ಸಭೆಗೆ ಬಂದಿಲ್ಲ. ಇಲಾಖೆಯ ಮಾಹಿತಿ ನೀಡದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡಿಲ್ಲ. ಈ ಬಗ್ಗೆ ಸಾಕಷ್ಟು ದೂರು ಕೇಳಿ ಬಂದಿದ್ದು, ಕೂಡಲೇ ಅಮಾನತು ಮಾಡಿ. ನಾನು ಹೇಳುವವರೆಗೆ ಮರು ನೇಮಕ ಆದೇಶ ಮಾಡಬೇಡಿ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ಅಕ್ರಮ ಪಡಿತರ ಅಕ್ಕಿ ಸಾಗಾಣೆ ಬಗ್ಗೆ ಹೆಚ್ಚಿನ ನಿಗಾಹಿಸಿ ಕಡಿವಾಣ ಹಾಕಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಮಾಫಿಯಾ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿಗಾ ವಹಿಸಬೇಕು. ಪಡಿತರ ಅಕ್ಕಿ ದಾಸ್ತಾನು ಮಾಡುವ ಡಿಪೋಗಳಲ್ಲಿಯೇ ದೊಡ್ಡ ಪ್ರಮಾಣದ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ದಿಢೀರ್ ಭೇಟಿ ನೀಡಿ ಪರಿಶೀಲನೆ ಕಾರ್ಯವನ್ನು ಇಲಾಖೆಯ ಅಧಿಕಾರಿಗಳು ಮಾಡಬೇಕು. ತಪ್ಪಿತಸ್ಥರು ಯಾರೇ ಇರಲಿ. ಮುಲಾಜಿಲ್ಲದೇ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ರಾಜ್ಯ ಸರ್ಕಾರ ನಿರುದ್ಯೋಗ ಯುವಕ-ಯುವತಿಯರಿಗೆ ಯುವನಿಧಿ ಯೋಜನೆಯಡಿ ಸಹಾಯಧನ ನೀಡುತ್ತಿದ್ದು, ಅವರಿಗೆ ಖಾಸಗಿ ವಲಯಗಳಲ್ಲಿ ಉದ್ಯೋಗ ಹೊಂದಲು ಕಾಲ-ಕಾಲಕ್ಕೆ ಉದ್ಯೋಗ ಮೇಳ ಆಯೋಜಿಸುವ ಮೂಲಕ ಉದ್ಯೋಗ ಕಲ್ಪಿಸಬೇಕು. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರ ಜೊತೆಗೆ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಮನವಿಗಳು ಸಲ್ಲಿಕೆಯಾಗುತ್ತಿದ್ದು, ಈ ಕುರಿತು ಬಸ್ ಗಳ ಬೇಡಿಕೆ ಇದ್ದಲ್ಲಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಅವರು ಇಲಾಖೆಯ ಕುರಿತು ಮಾಹಿತಿ ನೀಡುವುದರೊಂದಿಗೆ, ಯೂರಿಯಾ ಗೊಬ್ಬರ ಕೊರತೆ ಇಲ್ಲ ಎಂದು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜೆ.ಎನ್.ಗಣೇಶ್, ಕಚೇರಿಯಲ್ಲಿ ನೀವು ಎಸಿ, ಫ್ಯಾನ್ ಹಾಕಿಕೊಂಡು ಕೂತುಕೊಳ್ಳುವ ಮೂಲಕ ಏನು ಸಮಸ್ಯೆ ಇಲ್ಲವೆಂದು ಸುಲಭವಾಗಿ ಹೇಳುತ್ತೀರಿ. ಆದರೆ, ವಾಸ್ತವದಲ್ಲಿ ರೈತರು ಗೊಬ್ಬರಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಭೆಗೆ ತಪ್ಪು ಮಾಹಿತಿ ನೀಡಬೇಡಿ ಎಂದು ಅಧಿಕಾರಿಗೆ ಸೂಚಿಸಿದರು. ಶಾಸಕರುಗಳಾದ ನಾರಾ ಭರತ್ ರೆಡ್ಡಿ, ಬಿ.ಎಂ.ನಾಗರಾಜ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತ್ರಿಲೋಕ ಚಂದ್ರ, ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್, ಐಜಿಪಿ ವರ್ತಿಕಾ ಕಠಿಯಾರ್, ಎಸ್ಪಿ ಡಾ.ಶೋಭಾರಾಣಿ, ಡಿಸಿಎಫ್ ಬಸವರಾಜ ಇತರರಿದ್ದರು.