ಬಳ್ಳಾರಿ: ಬಿ.ನಾಗೇಂದ್ರ ಶೀಘ್ರದಲ್ಲಿಯೇ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದು, ನಾನು ಹಾಗೂ ನಾಗೇಂದ್ರ ಸೇರಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಭರ್ಜರಿಯಾಗಿ ಯಶಸ್ವಿಗೊಳಿಸುತ್ತೇವೆ ಎಂದು ವಸತಿ, ವಕ್ಫ್ ಹಾಗೂ ಬಳ್ಳಾರಿ ಜಿಲ್ಲಾ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಮೂರು ಕಡೆ ಜಾಗಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಂದನ್ನು ಅಂತಿಮಗೊಳಿಸಲಾಗುವುದು. ಸಮ್ಮೇಳನಕ್ಕೆ ದೊಡ್ಡ ಸಂಖ್ಯೆಯಲ್ಲಿ ಕನ್ನಡಪ್ರೇಮಿಗಳು ಆಗಮಿಸುವುದರಿಂದ ಯಾವುದೇ ಸಮಸ್ಯೆಯಾಗದಂತೆ ಸಮ್ಮೇಳನದ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಡಿಸೆಂಬರ್‌ನಲ್ಲಿಯೇ ಸಮ್ಮೇಳನ ನಡೆಸಲು ಪ್ರಯತ್ನಿಸುತ್ತೇವೆ. ಸಮ್ಮೇಳನಕ್ಕೆ ಸಮಯ ಕಡಿಮೆ ಇರುವುದು ನಿಜ. ಆದರೆ, ಇರುವ ಸಮಯದಲ್ಲಿಯೇ ಸಮ್ಮೇಳನದ ಸಿದ್ಧತೆ ಮಾಡಿಕೊಳ್ಳುತ್ತೇವೆ. ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ ಮೇಲೆ ಒಂದಷ್ಟು ವಿವಾದ ಇರುವುದರಿಂದ ಸಮ್ಮೇಳನದ ಸಿದ್ಧತೆ ತಡವಾಗಿದೆ. ಮುಂದಿನ ವಾರ ಸ್ವಾಗತ ಸಮಿತಿ ರಚನೆ ಮಾಡಿಕೊಂಡು ಮುಂದಿನ ಹಂತದ ಕಾರ್ಯಗಳನ್ನು ಸ್ವರಿತವಾಗಿ ಶುರುಗೊಳಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ನಾನು ಜಿಲ್ಲೆಗೆ ಬಂದಿರುವುದು ತಡವಾಗಿರಬಹುದು. ಆದರೆ, ನಾನು ಬಳ್ಳಾರಿಯ ಎಲ್ಲ ಶಾಸಕರು ಹಾಗೂ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ನೀಡಿದ್ದೇನೆ ಎಂದರು.ಸಿಎಂ ಬದಲಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ಬದಲಾವಣೆ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು ಎಂದರು.
ನಗರ ಹೊರವಲಯದ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳಿಯ ಜಮೀನು, ಕೊಳಗಲ್ ರಸ್ತೆಯ ಬಳಿಯಿರುವ ಏರ್‌ಫೋರ್ಟ್ ಪ್ರದೇಶ ಹಾಗೂ ಕಪ್ಪಗಲ್ಲು ರಸ್ತೆಯ ಜಾಗವನ್ನು ಸಚಿವ ಜಮೀರ್ ಅಹ್ಮದ್ ಖಾನ್ ಪರಿಶೀಲಿಸಿದರು. ವಿಶ್ವವಿದ್ಯಾಲಯ ಬಳಿಯ ಜಾಗವೇ ಸಮ್ಮೇಳನಕ್ಕೆ ಸೂಕ್ತ ಎಂದು ಕಂಡು ಬರುತ್ತಿದ್ದು ಈ ಬಗ್ಗೆ ಸಭೆ ನಡೆಸಿ, ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.ಶಾಸಕ ಬಿ.ನಾಗೇಂದ್ರ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ ವಿ.ಜೆ., ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಶಿವಲಿಂಗಪ್ಪ ಹಂದಿಹಾಳು ಮತ್ತಿತರರಿದ್ದರು.