ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಊಗಿನಹಳ್ಳಿಯಲ್ಲಿ ನಗೇಗಾ ಯೋಜನೆಯಲ್ಲಿ ಕೆಲಸ ಮಾಡದೆ ಹಣ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು, ಸಂಬಂಧಪಟ್ಟವರಿಗೆ ತಕ್ಕ ಶಿಕ್ಷೆಯಾಗಲು ಕ್ರಮ ವಹಿಸುವಂತೆ ಗ್ರಾಮಸ್ಥರು ಶಾಸಕ ಎಚ್.ಟಿ.ಮಂಜು ಅವರಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಜೇನುಗೂಡು ಮಹೇಶ್ ಮಾತನಾಡಿ, ಗ್ರಾಮದ ಪ್ರವೇಶದ್ವಾರದಿಂದ ಶಾಲೆವರೆಗೆ 300 ಗಿಡಗಳನ್ನು 5 ಲಕ್ಷ ರು. ವೆಚ್ಚದಲ್ಲಿ ನೆಡಬೇಕಿತ್ತು. ಆದರೆ, ಒಂದುಗಿಡವನ್ನು ನೆಡದೆ ಪರಿಸರ ಪ್ರೇಮಿಗಳಾದ ವೆಂಕಟೇಶ್ ನೆಟ್ಟಿರುವ ಗಿಡವನ್ನೆ ನೆಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿ 2 ಲಕ್ಷ ರು. ಬಿಲ್ ಮಾಡಿಕೊಂಡಿದ್ದಾರೆ. ಲಕ್ಷ್ಮೀಪುರ ಗ್ರಾಪಂ ನಿಂದ 5 ವರ್ಷಗಳ ಅವಧಿಯಲ್ಲಿ ಸಾಕಷ್ಟು ಕಳಪೆ ಕಾಮಗಾರಿಗಳು ನಡೆದಿವೆ. ಎಲ್ಲವನ್ನುತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಕ್ಕೆ ತೆರಳಲು ಗುಂಡಿ ರಸ್ತೆಯಿಂದ ಯಾವುದೇ ವಾಹನಗಳು ಬರದಂತಾಗಿದೆ. ಮಾದಾಪುರ- ಊಗಿನಹಳ್ಳಿ ಗೇಟ್ ಬಳಿ ಕೋರಿಕೆ ಬಸ್ ನಿಲುಗಡೆ ಮಾಡಲು ಕ್ರಮ ವಹಿಸಬೇಕು ಮನವಿ ಮಾಡಿದರು.ಶಾಸಕ ಎಚ್.ಟಿ.ಮಂಜು ಮಾತನಾಡಿ, ಪ್ರಗತಿ ಪಥ ಯೋಜನೆಯಡಿಯಲ್ಲಿ ಗ್ರಾಮದ ರಸ್ತೆ ಮಾಡಿಸಲಾಗುವುದು. ಬಸ್ ನಿಲುಗಡೆಗೆ ಸ್ಥಳಕ್ಕೆ ಕಂಪ್ಯೂಟರ್ ಟಿಕೆಟ್ ನೀಡಲು ಅಧಿಕಾರಿಗಳಿಗೆ ತಿಳಿಸಲಾಗುವುದು. ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸರ್ಕಾರದಿಂದ ಅನುದಾನದ ಕೊರತೆ ಕಾಡುತ್ತಿದೆ. ಇದರಿಂದ ಸಮಗ್ರ ತಾಲೂಕಿನ ಅಭಿವೃದ್ಧಿಗೆ ಬಹಳ ತೊಡಕಾಗಿದೆ ಎಂದರು.
ಗಡಿಗ್ರಾಮ ಊಗಿನಹಳ್ಳಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ನರೇಗಾ ಕಾಮಗಾರಿಯಲ್ಲಿ ನಡೆದಿರುವ ಅಕ್ರಮವನ್ನು ತನಿಖೆ ಮಾಡಿಸಿ ಸೂಕ್ತ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಲಾಗುವುದು ಎಂದು ಭರವಸೆ ನೀಡಿದರು.ಗ್ರಾಮದ ಪರಿಸರಪ್ರೇಮಿ ವೆಂಕಟೇಶ್ ರೀತಿ ಪ್ರತಿ ಗ್ರಾಮಗಳಲ್ಲಿ ಫಲಾಪೇಕ್ಷೆಯಿಲ್ಲದೆ ಗಿಡ ನೆಟ್ಟು ಬೆಳೆಸಿ ಉಳಿಸಿ ಮಾಡಿದರೆ ಪರಿಸರ ಸಂರಕ್ಷಣೆ, ಶುದ್ಧ ಗಾಳಿ ಲಭಿಸಿ ಆರೋಗ್ಯವಂತರಾಗಬಹುದು ಎಂದು ಪ್ರಶಂಶಿಸಿದರು.
ಈ ವೇಳೆ ಗ್ರಾಮಸ್ಥರಾದ ಉಮೇಶ್, ಸುರೇಶ್, ಮೋಹನ್, ಸೋಮಸುಂದರ್, ದಿಲೀಪ್, ನಿಂಗೇಗೌಡ, ವೆಂಕಟೇಶ್, ಮಂಟಿ ಮಹೇಶ್‌ಗೌಡ, ಮಂಜೇಗೌಡ, ರವಿ, ಹೇಮಂತ್, ಬಸವರಾಜು ಹಾಜರಿದ್ದರು.