ಸಚಿವ ಜಮೀರ್ ವಕ್ಫ್ ವಿಚಾರದಲ್ಲಿ ಸಿಎಂ ಹೆಸರು ದುರ್ಬಳಕೆ

KannadaprabhaNewsNetwork |  
Published : Nov 20, 2024, 12:33 AM IST
ಫೋಟೋ:೧೯ಕೆಪಿಸೊರಬ-೦೧ : ಸೊರಬ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಸೊರಬ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಸಚಿವ ಜಮೀರ್ ಅಹ್ಮದ್ ಅವರು ಕ್ಷುಲ್ಲಕ ರಾಜಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಕ್ಫ್ ವಿಚಾರದಲ್ಲಿ ರಾಜ್ಯದ ಜನತೆಗೆ ತಲ್ಲಣವನ್ನು ಸೃಷ್ಠಿಸಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆರೋಪಿಸಿದರು.

ಮಂಗಳವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರ, ಮಠ ಮಾನ್ಯಗಳ ಜಮೀನು ಹಾಗೂ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದವರ ಜಮೀನುಗಳ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿರುವುದು ಪ್ರಸ್ತುತ ರಾಷ್ಟ್ರ ವ್ಯಾಪ್ತಿಯಲ್ಲಿ ಚರ್ಚೆಯಾಗುತ್ತಿದೆ.

ರಾಷ್ಟ್ರದಲ್ಲಿ ಸುಮಾರು 30 ಲಕ್ಷ ಎಕರೆ ಪ್ರದೇಶ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ. ರಾಜ್ಯದಲ್ಲಿ ದೊರೆತಿರುವ ಅಂಕಿ ಅಂಶದ ಪ್ರಕಾರ 1.16 ಲಕ್ಷ ಎಕರೆ ಪ್ರದೇಶ ವಕ್ಫ್ ಆಸ್ತಿ ಎಂದು ನಮೂದಾಗಿದ್ದು, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಬೆಲೆ ಬಾಳುವ ಆಸ್ತಿಯನ್ನು ತಕ್ಷಣವೇ ಸರ್ಕಾರ ವಶಕ್ಕೆ ಪಡೆಯುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ವಕ್ಫ್ ಬೋರ್ಡ್ ಅಧ್ಯಕ್ಷರೆಂದು ಘೋಷಣೆ ಮಾಡಿಕೊಂಡಿರುವ ಜಮೀರ್ ಅಹ್ಮದ್ ಅವರು ಸಚಿವ ಸ್ಥಾನದ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳನ್ನು ಬಳಸಿಕೊಂಡು ರೈತರಿಗೆ ಅವಕಾಶವನ್ನು ನೀಡದೇ ಸಾವಿರಾರು ಎಕರೆ ಪ್ರದೇಶವನ್ನು ವಕ್ಫ್ ಬೋರ್ಡ್‌ಗೆ ಸೇರಿಸಿದ್ದಾರೆ. ಈ ನಡುವೆ ವಕ್ಫ್ ಆಸ್ತಿಯನ್ನು ಹಿಂದಿನಿಂದಲೂ ಕಾಂಗ್ರೆಸ್‌ನ ನಾಯಕರು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ರೈತರಿಗೆ ಹಾಗೂ ಜನ ಸಾಮಾನ್ಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ನ.25 ರಿಂದ 27ರವರೆಗೆ ಬೀದರ್, ರಾಯಚೂರು, ಕಲಬುರಗಿ ಭಾಗದಲ್ಲಿ ಪಕ್ಷದ ಸಮಾನ ಮನಸ್ಕರರು ಒಗ್ಗೂಡಿ ಪ್ರವಾಸ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಕಳೆದರೂ ಕೂಡ ಅಭಿವೃದ್ಧಿ ಶೂನ್ಯವಾಗಿದೆ. ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಕನಿಷ್ಠ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕೆಲಸ ಮಾಡಲು ಸಾಧ್ಯವಾಗಿಲ್ಲ. ಸೊರಬ-ಶಿರಾಳಕೊಪ್ಪ, ಶಿಗ್ಗಾ-ಶಿರಾಳಕೊಪ್ಪ, ತವನಂದಿ-ಬಿಳಗಲಿ ಸೇರಿದಂತೆ ಅನೇಕ ರಸ್ತೆಗಳಿಗೆ ಹಿಂದಿನ ಬಿಜೆಪಿ ಸರ್ಕಾರದ ಅನುಮೋದನೆ ನೀಡಲಾಗಿತ್ತು. ಅಂತಿಮವಾಗಿ ಹಣಕಾಸು ಒಪ್ಪಿಗೆ ಮಾತ್ರ ಬಾಕಿ ಉಳಿದಿತ್ತು. ಹಾಲಿ ಆಡಳಿತದಲ್ಲಿರುವ ಸರ್ಕಾರದಿಂದ ಯಾವುದೇ ಗುದ್ದಲಿ ಪೂಜೆ, ಶಂಕುಸ್ಥಾಪನೆಗಳು ನಡೆದಿಲ್ಲ. ರಾಜ್ಯದ ಜನತೆ ಕಾಂಗ್ರೆಸ್‌ನ ಮೇಲಿರಿಸಿದ ನಿರೀಕ್ಷೆಗಳು ಹುಸಿಯಾಗಿದೆ ಎಂದರು.

ಈ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ಕಡಸೂರು, ಪ್ರಕಾಶ್ ಅಗಸನಹಳ್ಳಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳೆಯಮ್ಮ ಈಶ್ವರಪ್ಪ, ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ಗುರುಕುಮಾರ್ ಪಾಟೀಲ್, ಪುರಸಭೆ ಸದಸ್ಯ ಎಂ.ಡಿ.ಉಮೇಶ್, ಪ್ರಮುಖರಾದ ಅಮಿತ್ ಗೌಡ, ಜಾನಕಪ್ಪ ಒಡೆಯರ್ ಯಲಸಿ, ಕೃಷ್ಣಮೂರ್ತಿ ಕೊಡಕಣಿ, ಅಭಿಷೇಕ್‌ಗೌಡ ಬೆನ್ನೂರು, ಸಂಜಯ್ ತಡಗಳಲೆ ಸೇರಿದಂತೆ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತರಕಾರಿಯಲ್ಲಿ ಹಾನಿಕಾರಕ ಅಂಶ ಪತ್ತೆ: ಶೀಘ್ರ ಸೂಕ್ತ ಮಾರ್ಗಸೂಚಿ
ಸಿಲಿಂಡರ್‌ಗೆ ಹಾಹಾಕಾರ: ಊಟ, ತಿಂಡಿ ಹರೋಹರ!