ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಂಗಳವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಅಭಿಯಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಕಾನೂನು ದಿನವನ್ನಾಗಿ ಇದನ್ನು ಆಚರಿಸಲಾಗುತ್ತಿತ್ತು. ಇದನ್ನು ಸಂವಿಧಾನ ಸಮರ್ಪಣಾ ದಿನವಾಗಿ ಅರ್ಥಪೂರ್ಣವಾಗಿ ಆಚರಿಸುವ ಅಭಿಲಾಷೆ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರದು ಎಂದು ತಿಳಿಸಿದರು.
ನ.26ರಿಂದ ಜನವರಿ 26ರವರೆಗೆ 2 ತಿಂಗಳುಗಳ ಕಾಲ ದೇಶಾದ್ಯಂತ ಸಂವಿಧಾನ ಸನ್ಮಾನ ಅಭಿಯಾನ ಆಚರಿಸಲಾಗುತ್ತಿದೆ. ಸಂವಿಧಾನ ಒಂದು ಧರ್ಮಗ್ರಂಥ. ಆದರೆ, ಸಂವಿಧಾನಕ್ಕೆ ಅವಹೇಳನ ಮಾಡಿದ ಕಾಂಗ್ರೆಸ್ಸಿಗರು ಸಂವಿಧಾನದ ರಕ್ಷಕರು, ಸಂವಿಧಾನ ಪ್ರತಿಪಾದಕರಂತೆ ಕಪಟ ನಾಟಕವನ್ನು ಹಲವಾರು ದಶಕಗಳಿಂದ ನಿರಂತರವಾಗಿ ಮಾಡುತ್ತ ಬಂದಿದ್ದಾರೆ ಎಂದು ಟೀಕಿಸಿದರು.ಕಾಂಗ್ರೆಸ್ ಪಕ್ಷದವರು ಇತಿಹಾಸವನ್ನು ಮರೆಮಾಚಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ಅದನ್ನು ತೊಡೆದು ಹಾಕಿ, ಡಾ. ಬಾಬಾಸಾಹೇಬ ಅಂಬೇಡ್ಕರರ ನೇತೃತ್ವದಲ್ಲಿ ರಚಿಸಿದ ಸಂವಿಧಾನಕ್ಕೆ ಸಂಪೂರ್ಣ ಗೌರವ ತಂದು ಕೊಡುವ ಪ್ರಾಮಾಣಿಕ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಸ್ವಾತಂತ್ರ್ಯ ನಂತರದಲ್ಲಿ ಸಂವಿಧಾನ ರಚನೆ ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ್, ಶಾಸಕ ಬಸವರಾಜ ಮತ್ತಿಮೊಡ ಮತ್ತಿತರರು ಭಾಗವಹಿಸಿದ್ದರು.