ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಸರ್ಕಾರದ ಯೋಜನೆ ಮತ್ತು ಸವಲತ್ತುಗಳು ಜನರ ಮನೆ ಬಾಗಿಲಿಗೆ ಸಕಾಲದಲ್ಲಿ ತಲುಪಲಿ ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಜನ ಸ್ಪಂದನಾ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಅಖಿಲ ನಾಮಧಾರಿಗೌಡರ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಮೂಲಕ ಅಧಿಕಾರಿಗಳು ಸರ್ಕಾರದ ಕಾರ್ಯಕ್ರಮಗಳು ಯಶಸ್ವಿಯಾಗುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಕೆಲವು ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಅಂತಹವರು ಕೂಡಲೇ ತಮ್ಮ ವರ್ತನೆಯನ್ನು ತಿದ್ದಿಕೊಂಡು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.ಇಂದಿನ ಜನ ಸ್ಪಂದನಾ ಸಭೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳ ವ್ಯಾಪ್ತಿಯ ನಾಗರೀಕರು ಹೇಳಿಕೊಂಡ ಸಮಸ್ಯೆಗಳು ಮತ್ತು ನೀಡಿದ ದೂರಿನ ಬಗ್ಗೆ ತ್ವರಿತವಾಗಿ ಸ್ಪಂದಿಸಿ ಅವುಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಅಧಿಕಾರಿಗಳು ಕ್ರಮ ಕೈಗೊಂಡು ಆ ಬಗ್ಗೆ ನನಗೆ ವರದಿ ನೀಡಬೇಕೆಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಜನ ಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡುವಾಗ ಲಿಖಿತವಾಗಿ ನೀಡಿ ಅಗತ್ಯ ದಾಖಲೆ ಕೊಟ್ಟರೆ ನಾವು ಮುಂದಿನ ದಿನಗಳಲ್ಲಿ ಅವುಗಳಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆ ಅಂತಹ ಸ್ಥಳಗಳ ಮೇಲೆ ದಿಢೀರ್ ದಾಳಿ ಮಾಡಿ ಯಾವುದೇ ಮುಲಾಜಿಗೆ ಒಳಗಾಗದೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ನಿರೀಕ್ಷಕಿ ಶೈಲಜಾಗೆ ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.
ಮಧುವನಳ್ಳಿ ರಸ್ತೆಯಲ್ಲಿ ಕಳೆದ 20 ದಿನಗಳ ಹಿಂದೆ ನೂತನವಾಗಿ ಆರಂಭವಾಗಿರುವ ವೈನ್ ಶಾಪ್ ಮಾಲೀಕರು ಸರ್ಕಾರದ ನಿಯಮದಂತೆ ನಡೆಸದೆ ಅಲ್ಲಿ ಕುಡುಕರ ಹಾವಳಿ ಅತಿಯಾಗಿದೆ ಎಂದು ಆ ಭಾಗದ ಮಹಿಳೆಯರು ದೂರು ನೀಡಿದಾಗ ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಇಲಾಖೆ ನಿಯಮನುಸಾರ ನಡೆಸದಿದ್ದರೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿದ್ದ ನೂರಾರು ಮಂದಿ ನಾಗರೀಕರು ಒತ್ತುವರಿ ತೆರವು, ರಸ್ತೆ ದುರಸ್ತಿ, ಕೆರೆಕಟ್ಟೆ ತುಂಬಿಸುವ ಕೋರಿಕೆ ಸೇರಿದಂತೆ ಸಾರ್ವಜನಿಕ ಸಮಸ್ಯೆ ಮತ್ತು ತಮ್ಮ ಜಮೀನಿಗೆ ಸಂಬಂಧಿತ ವೈಯುಕ್ತಿಕ ಸಂಕಷ್ಟಗಳನ್ನು ಹೇಳಿಕೊಂಡು ಅವುಗಳ ಪರಿಹಾರಕ್ಕೆ ಮನವಿ ಸಲ್ಲಿಸಿದರು.
ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಕೆ.ಆರ್. ನಗರ ತಹಸೀಲ್ದಾರ್ ಸಿ.ಎಸ್. ಪೂರ್ಣಿಮ, ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ತಾಲೂಕು ಆರೋಗ್ಯ ಅಧಿಕಾರಿ ಡಾ. ಡಿ. ನಟರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ಎಸ್. ರಾಜಾರಾಮ್ ವೈಲಾಯ, ವಿನುತ್, ಅರ್ಕೇಶ್ವರಮೂರ್ತಿ, ಬಿಇಒ ಆರ್. ಕೃಷ್ಣಪ್ಪ, ಸಿಡಿಪಿಓ ಸಿ.ಎಂ. ಅಣ್ಣಯ್ಯ, ಎಡಿಎಲ್.ಆರ್. ಶ್ರೀಕಂಠಶರ್ಮ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಎಚ್.ಎಂ. ಅಶೋಕ್, ಡಿಪೋ ವ್ಯವಸ್ಥಾಪಕ ಮಹೇಶ್, ಶಿರಸ್ತೇದಾರ್ ಅಸ್ಲಾಂ ಭಾಷಾ, ಡಾ. ಶಿವಶಂಕರ್ , ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.