ಆಂಗ್ಲ ಭಾಷೆ ವ್ಯಾಮೋಹ ಬಿಡಿ, ಕನ್ನಡ ಮಾತನಾಡಿ

KannadaprabhaNewsNetwork |  
Published : Jul 21, 2024, 01:26 AM IST
ದೊಡ್ಡಣ್ಣ | Kannada Prabha

ಸಾರಾಂಶ

ಮಾತನಾಡಿದಂತೆ ಬರೆಯುವ ಮತ್ತು ಬರೆದಂತೆ ಮಾತನಾಡುವ ಏಕೈಕ ಭಾಷೆ ಕನ್ನಡ. ಆಂಗ್ಲ ಭಾಷೆ ಕಲಿತ ಮಾತ್ರಕ್ಕೆ ತಾಯಿ ಭಾಷೆ ಮರೆಯಲು ಸಾಧ್ಯವಿಲ್ಲ. ಅದನ್ನು ಮಾತನಾಡುವ ಮೂಲಕ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ.

ಹುಬ್ಬಳ್ಳಿ:

ಜಗತ್ತಿನ ಮೂರು ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಹಾಗಾಗಿ ಆಂಗ್ಲ ಭಾಷೆ ಮೇಲಿನ ವ್ಯಾಮೋಹ ಬಿಟ್ಟು ಹೆಮ್ಮೆಯಿಂದ ಕನ್ನಡ ಮಾತನಾಡಬೇಕು ಎಂದು ಚಿತ್ರನಟ ಎಸ್‌. ದೊಡ್ಡಣ್ಣ ಹೇಳಿದರು.

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕನ್ನಡ ಸಂಘದ ವತಿಯಿಂದ ಕಿಮ್ಸ್‌ನ ಸಭಾಭವನದಲ್ಲಿ ಶನಿವಾರ ನಡೆದ ಕನ್ನಡ ಹಬ್ಬ ಡಿಂಡಿಮ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.

ವ್ಯಾಕರಣ, ಸಂಧಿ, ಸಮಾಸ, ಅಲ್ಪಪ್ರಾಣ, ಮಹಾಪ್ರಾಣ ಒಳಗೊಂಡಿರುವ ಕನ್ನಡಭಾಷೆಗೆ ತನ್ನದೇಯಾದ ಇತಿಹಾಸವಿದೆ. ಕನ್ನಡ ಭಾಷೆಯನ್ನು ದೇಶದ ನಾನಾ ಭಾಗದ ರಾಜ-ಮಹಾರಾಜರು ಕಸ್ತೂರಿ ಕನ್ನಡವನ್ನು ಭಿನ್ನ-ವಿಭಿನ್ನವಾಗಿ ಬಣ್ಣಿಸಿದ್ದಾರೆ. ಕನ್ನಡಕ್ಕಿಂತ ಮಿಗಿಲಾದ ಭಾಷೆ ಮತ್ತೊಂದಿಲ್ಲ ಎಂದರು.

ಮಾತನಾಡಿದಂತೆ ಬರೆಯುವ ಮತ್ತು ಬರೆದಂತೆ ಮಾತನಾಡುವ ಏಕೈಕ ಭಾಷೆ ಕನ್ನಡ. ಆಂಗ್ಲ ಭಾಷೆ ಕಲಿತ ಮಾತ್ರಕ್ಕೆ ತಾಯಿ ಭಾಷೆ ಮರೆಯಲು ಸಾಧ್ಯವಿಲ್ಲ. ಅದನ್ನು ಮಾತನಾಡುವ ಮೂಲಕ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಿದೆ ಎಂದ ಅವರು, ಜೀವನದಲ್ಲಿ ವಿದ್ಯಾರ್ಥಿಗಳು ವ್ಯಸನಕ್ಕೆ ತುತ್ತಾಗದೇ, ಜೀವನದ ಸಾರ್ಥಕತೆಗೆ ಪೂರಕವಾಗಿ ಅಡಿಪಾಯ ಹಾಕಿಕೊಳ್ಳಬೇಕು. ಒಳ್ಳೆಯ ಸಂಸ್ಕಾರ, ನಡೆ, ನುಡಿ ತಮ್ಮ ಗಣತೆ ಹೆಚ್ಚಿಸುತ್ತದೆ. ಹಾಗಾಗಿ ತಾಯಿ ನೀಡಿದ ಸಂಸ್ಕಾರ, ತಂದೆ ನಿರ್ವಿಕಾರ ಪ್ರೀತಿಯನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರೆ ನೀಡಿದರು.

ಅಹಂಕಾರ, ಭ್ರಮೆಯಲ್ಲಿ ಬದುಕುವುದನ್ನು ಬಿಡಬೇಕು. ವಾಸ್ತವತೆ ಅರಿವಿನೊಂದಿಗೆ ಬದುಕು ಸಾಗಿಸುವುದನ್ನು ಕಲಿಯಬೇಕು. ಗುರು ಮತ್ತು ದೈವದ ಮುಂದೆ ತಲೆಬಾಗಿ ಸುಜ್ಞಾನ ಪಡೆಯುತ್ತ ವಿದ್ಯಾರ್ಥಿಗಳ ಚಿತ್ತ ಇರಬೇಕು. ಸಿನಿಮಾ ಎನ್ನುವುದು ಭ್ರಮೆ. ಈ ಭ್ರಮೆಯಲ್ಲಿ ಬದುಕುವುದನ್ನು ಬಿಟ್ಟು ಕ್ರಿಯಾಶೀಲರಾಗಿ ಬೆಳೆದು ತಂದೆ-ತಾಯಿ ಗೌರವ ಹೆಚ್ಚಿಸುವ ಕರ್ತವ್ಯ ವಿದ್ಯಾರ್ಥಿಗಳ ಮೇಲಿದೆ. ಹಾಗಾಗಿ ಈ ಕರ್ತವ್ಯದೊಂದಿಗೆ ವಿದ್ಯಾರ್ಜನೆ ಮಾಡಿ ಸಂಸ್ಥೆಯ ಗೌರವ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.

ಇದೇ ವೇಳೆ ಕಿಮ್ಸ್‌ ಕನ್ನಡ ಸಂಘದ ವತಿಯಿಂದ ನಟ ಎಸ್‌. ದೊಡ್ಡಣ್ಣ, ನಟ, ನಿರ್ದೇಶಕ ಅರುಣಕುಮಾರ್‌ ಆರ್‌.ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಿಮ್ಸ್‌ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ, ಆಡಳಿತಾಧಿಕಾರಿ ಡಾ. ರಮೇಶ ಕಳಸದ, ಕಿಮ್ಸ್‌ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ, ಡಾ. ರಾಜಶೇಖರ ದ್ಯಾಬೇರಿ, ಡಾ. ಜಾನಕಿ ತೊರವಿ, ಡಾ. ಎಸ್‌.ಎಫ್‌. ಕಮ್ಮಾರ, ಡಾ. ಶ್ಯಾಮಸುಂದರ, ಡಾ. ವಿಜಯಶ್ರೀ ಬಿ.ಎಚ್‌., ಡಾ. ಬಸವರಾಜ ಪಾಟೀಲ, ನಿರ್ಮಲಾ ಕಮರಿ, ನಿಖಿಲಕುಮಾರ ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ