ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಬೇಸಿಗೆ ಸಮಯ ಸಮೀಪಿಸುತ್ತಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸರಬರಾಜು ಮತ್ತು ಇತರ ಮೂಲಭೂತ ಸವಲತ್ತು ಒದಗಿಸಲು ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಕೃಷ್ಣರಾಜೆಂದ್ರ ಸಭಾಂಗಣದಲ್ಲಿ ನಡೆದ ಬರ ನಿರ್ವಹಣೆ ಸಭೆಯಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ 34 ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಲಭ್ಯತೆ ಮತ್ತು ಇರುವ ಸಮಸ್ಯೆಗಳ ಬಗ್ಗೆ ನನಗೆ ಪೂರ್ಣ ಮಾಹಿತಿ ನೀಡಬೇಕೆಂದು ಆದೇಶಿಸಿದರಲ್ಲದೆ, ಕೆಲವು ಪಂಚಾಯ್ತಿಗಳಿಗೆ ನಾನೇ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆಂದರು.ದಿನೇ ದಿನೇ ಅಂತರ್ಜಲ ಕುಸಿಯುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ತೀವ್ರವಾಗಿದ್ದು, ಹೆಚ್ಚು ಜಲಮೂಲ ಇರುವ ಬೋರ್ವೆಲ್ಗಳು ಮತ್ತಿತರ ನೀರಿನ ಮೂಲಗಳ ಪಟ್ಟಿ ಮಾಡಿಕೊಂಡು ಯಾವುದೇ ಸಂದಿಗ್ದ ಸ್ಥಿತಿ ಎದುರಾದರೂ ಸಮರ್ಪಕವಾಗಿ ಎದುರಿಸಲು ಸಿದ್ಧರಾಗಿರಬೇಕೆಂದು ಸಲಹೆ ನೀಡಿದರು.
ಕೆಲವು ಪಂಚಾಯ್ತಿಗಳಲ್ಲಿ ನಿರ್ಮಾಣ ಮಾಡಿರುವ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು, ಅವುಗಳು ಪ್ರಯೋಜನಕ್ಕೆ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಪಿಡಿಒಗಳು ಕೂಡಲೇ ಈ ಬಗ್ಗೆ ತುರ್ತು ಗಮನ ಹರಿಸಿ ಕಳಪೆಯಾಗಿರುವುದನ್ನು ದುರಸ್ಥಿಪಡಿಸಿ ನೀರು ನಿಲ್ಲುವಂತೆ ಮಾಡಬೇಕೆಂದರು.ಇದರೊಂದಿಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಾವೇರಿ ಜಲಾನಯನ ಪ್ರದೇಶದ ವಿವಿಧ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಿಸಿ ನದಿಪಾತ್ರದ ಸುತ್ತ ಮುತ್ತಲ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಎಸ್.ಎನ್. ನರಗುಂದ, ತಾಪಂ ಇಒ ಜಿ.ಕೆ. ಹರೀಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ. ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ ಕೆ.ಜೆ. ಮಲ್ಲಿಕಾರ್ಜುನ, ಸೆಸ್ಕ್ ಎಇಇ ಅರ್ಕೇಶ್ ಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ರಾಜರಾಮ್ ವೈಲಾಯ ಇದ್ದರು.