ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಹಾರೋಹಳ್ಳಿಯ ಎಪಿಎಂಸಿಯಲ್ಲಿ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಯಿಂದ ಆರಂಭಗೊಂಡ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಹಾಗೂ ರಾಗಿ ನೋಂದಣಿ ಮತ್ತು ಖರೀದಿ ಕೇಂದ್ರಕ್ಕೆ ಶಾಸಕ ದರ್ಶನ್‌ಪುಟ್ಟಣ್ಣಯ್ಯ ಚಾಲನೆ ನೀಡಿದರು.ನಂತರ ಮಾತನಾಡಿದ ಶಾಸಕರು, ವರ್ಷವಿಡಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರವನ್ನು ತೆರೆದಿರಬೇಕು ಎಂಬ ವಿಚಾರವಾಗಿ ರೈತ ಸಂಘಟನೆಯಿಂದ ನಿರಂತರ ಹೋರಾಟ ಮಾಡುತ್ತಿದೆ. ಈ ವಿಚಾರವಾಗಿ ಸರಕಾರದೊಂದಿಗೂ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ರಾಗಿ ಖರೀದಿ ಮಾಡಲು ಮುಂದಾಗಿದೆ. ಭತ್ತಕ್ಕೆ 2300 ಹಾಗೂ ರಾಗಿಗೆ 4290 ರೂ.ಪ್ರತಿ ಕ್ವಿಂಟಲ್‌ಗೆ ನಿಗಧಿಪಡಿಸಿದೆ. ಭತ್ತ ಎಕರೆಗೆ ಕನಿಷ್ಠ 25 ಕ್ವಿಂಟಲ್ ಹಾಗೂ ರಾಗಿ ಎಕರೆಗೆ 10 ಕ್ವಿಂಟಲ್‌ಗೆ ಖರೀದಿಸಲು ನಿಗಧಿಪಡಿಸಲಾಗಿದೆ ಎಂದರು.ಭತ್ತಕ್ಕೆ 126 ರೈತರು 3744.50 ಕ್ವಿಂಟಲ್ ಹಾಗೂ ರಾಗಿ 2349 ಮಂದಿ ರೈತರು 34,449.50 ಕ್ವಿಂಟಲ್ ನೋಂದಣಿ ಮಾಡಿಸಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಸಿಕೊಳ್ಳಬೇಕು ಎಂದರು.
ಫಡರೇಷನ್ ನಿರ್ದೇಶಕ ಎಸ್.ಎಲ್.ಮೋಹನ್ ಮಾತನಾಡಿ, ರೈತರು ಭತ್ತ ಹಾಗೂ ರಾಗಿ ಕಟಾವು ಮಾಡಿ ಒಕ್ಕಣೆ ಕಾರ್‍ಯ ನಡೆಯುವ ವೇಳೆ ಸರ್ಕಾರಗಳು ಖರೀದಿ ಕೇಂದ್ರಗಳನ್ನು ಆರಂಭಿಸಬೇಕು. ಆದರೆ, ಸರ್ಕಾರ ಒಕ್ಕಣೆ ಕಾರ್‍ಯಮುಗಿದು ದಲ್ಲಾಳಿಗಳು ರೈತರಿಂದ ಭತ್ತ ಹಾಗೂ ರಾಗಿ ಖರೀದಿ ಮಾಡಿದ ಬಳಿಕ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಂದ ಹೆಚ್ಚು ಧಾನ್ಯ ಖರೀದಿಸಲು ಸಾಧ್ಯವಾಗುವುದಿಲ್ಲ ಎಂದರು.ಸರ್ಕಾರ ಡಿಸೆಂಬರ್ ತಿಂಗಳಲ್ಲಿಯೇ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು, ಜತೆಗೆ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 2300 ರೂ.ನಿಗಧಿಪಡಿಸಿದೆ ಆದರೆ, ಮಾರುಕಟ್ಟೆಯಲ್ಲಿ ಇದಕ್ಕಿಂತ ಅಧಿಕ ಬೆಲೆ ಇರುವುದರಿಂದ ರೈತರು ಹೆಚ್ಚಾಗಿ ಖರೀದಿ ಕೇಂದ್ರಗಳಿಗೆ ಭತ್ತ ಮಾರಾಟ ಮಾಡುವುದಿಲ್ಲ. ಆದ್ದರಿಂದ ಶಾಸಕರು ಈ ವಿಚಾರವಾಗಿ ಸರಕಾರದೊಂದಿಗೆ ಚರ್ಚಿಸಿ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.
ಕಾರ್‍ಯಕ್ರಮದಲ್ಲಿ ರೈತಸಂಘದ ಅಧ್ಯಕ್ಷ ಕೆನ್ನಾಳು ವಿಜಯ್‌ಕುಮಾರ್, ಖರೀದಿ ಕೇಂದ್ರ ವ್ಯವಸ್ಥಾಪಕಿ ಶೀಲಾ, ರೀಜನಲ್ ಮ್ಯಾನೇಜರ್ ವೆಂಕಟೇಶ್‌ನಾಯ್ಕ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಪಂಕಜ ಸೇರಿದಂತೆ ಹಲವರು ಇದ್ದರು.ಎಪಿಎಂಸಿ ಕಾರ್ಯದರ್ಶಿಗೆ ತರಾಟೆಪಾಂಡವಪುರ ಪಟ್ಟಣದಲ್ಲಿ ಭತ್ತ ಹಾಗೂ ರಾಗಿ ಖರೀದಿ ಕೇಂದ್ರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರೈತರು ಎಪಿಎಂಸಿ ಕಾರ್ಯದರ್ಶಿ ಪಂಕಜ ಅವರನ್ನು ಪುರಸಭೆ ಸದಸ್ಯ ಹಾರೋಹಳ್ಳಿ ಲಕ್ಷ್ಮೇಗೌಡ, ಪಟೇಲ್ ರಮೇಶ್, ಸೇರಿದಂತೆ ಹಲವರು ತರಾಟೆಗೆ ತೆಗೆದುಕೊಂಡರು.
ಎಳನೀರು ಹೊರಗಡೆ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮವಹಿಸಿಲ್ಲ. ಜತೆಗೆ ಎಪಿಎಂಸಿಯಲ್ಲಿ ರೈತರು, ದಲ್ಲಾಳಿಗಳಿಗೆ ಬೇಕಿರುವ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಒದಗಿಸಿಕೊಟ್ಟಿಲ್ಲ, ಸ್ವಚ್ಛತೆ ಕಾಪಾಡುತ್ತಿಲ್ಲ, ಕಾರ್ಯಯದರ್ಶಿ ನಿಗಧಿತ ಸಮಯಕ್ಕೆ ಕಚೇರಿಗೆ ಬರೋದಿಲ್ಲ ಎಂದು ಶಾಸಕರ ಎದುರೇ ತರಾಟೆಗೆ ತೆಗೆದುಕೊಂಡರು. ಬಳಿಕ ಶಾಸಕರು ರೈತರನ್ನು ಸಮಾಧಾನಪಡಿಸಿ ಕಾರ್ಯದರ್ಶಿ ಬಳಿ ಸಮಸ್ಯೆ ಆಲಿಸಿದರು. ಕಾರ್ಯದರ್ಶಿ ಅನುದಾನದ ಕೊರತೆ ಇದೆ ಎಂದು ಶಾಸಕರಿಗೆ ಮನವಿ ಪತ್ರ ನೀಡಿದ ಬಳಿಕ ಮೂಲಸೌಕರ್ಯಕ್ಕೆ ಬೇಕಿರುವ ಅನುದಾನ ಕೊಡಿಸುವ ಭರವಸೆ ನೀಡಿದರು, ಸ್ವಚ್ಛತೆ ಕಾಪಾಡಲು ಕಾರ್‍ಯದರ್ಶಿಗೆ ಶಾಸಕರು ಸೂಚಿಸಿದರು.