ಕಳಪೆ ಶೂ ಸಾಕ್ಸ್‌ ವಿತರಣೆ ಮಾಡದಂತೆ ಶಾಸಕರ ತಾಕೀತು

KannadaprabhaNewsNetwork |  
Published : Sep 19, 2026, 02:30 AM IST
ಹೂವಿನಹಡಗಲಿಯ ಬಿಇಒ ಕಚೇರಿಯಲ್ಲಿ ಶೂ ಮತ್ತು ಸಾಕ್ಸ್‌ಗಳನ್ನು ಇಟ್ಟಿರುವುದು.  | Kannada Prabha

ಸಾರಾಂಶ

ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪೂರೈಕೆ ಮಾಡಿರುವ ಶೂ ಮತ್ತು ಸಾಕ್ಸ್‌ ಮೇಲೆ ಯಾವ ಕಂಪನಿಯದ್ದು, ಮಾರುಕಟ್ಟೆ ಬೆಲೆ ಸೇರಿದಂತೆ ಯಾವ ಮಾಹಿತಿಯೂ ಇಲ್ಲ

ಹೂವಿನಹಡಗಲಿ: ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಪೂರೈಕೆಯಾಗಿದ್ದ ಶೂ ಸಾಕ್ಸ್‌ ಕಳಪೆ ಗುಣಮಟ್ಟ ಹೊಂದಿವೆ. ಆದರಿಂದ ಯಾವುದೇ ಕಾರಣಕ್ಕೂ ವಿತರಣೆ ಮಾಡದಂತೆ ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ತಾಲೂಕಿನಲ್ಲಿ 140 ಸರ್ಕಾರಿ ಪ್ರಾಥಮಿಕ ಶಾಲೆ, 27 ಸರ್ಕಾರಿ ಪ್ರೌಢ ಶಾಲೆಗಳಲ್ಲಿ 20 ಸಾವಿರಕ್ಕೂ ಅಧಿಕ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳ ಅರ್ಧ ಶೈಕ್ಷಣಿಕ ವರ್ಷ ಕಳೆಯುತ್ತಾ ಬಂದರೂ ಈವರೆಗೂ ಶೂ ಸಾಕ್ಸ್‌ ವಿತರಣೆಯಾಗಿಲ್ಲ. ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಸಾಕ್ಸ್‌ ವಿತರಣೆಗೆ ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿತ್ತು. ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಪೂರೈಕೆ ಮಾಡಿರುವ ಶೂ ಮತ್ತು ಸಾಕ್ಸ್‌ ಮೇಲೆ ಯಾವ ಕಂಪನಿಯದ್ದು, ಮಾರುಕಟ್ಟೆ ಬೆಲೆ ಸೇರಿದಂತೆ ಯಾವ ಮಾಹಿತಿಯೂ ಇಲ್ಲ, ಈಗಾಗಲೇ ರಾಜ್ಯದಲ್ಲಿ ಲೋಕಾಯುಕ್ತರು ಈ ಕುರಿತು ದೂರು ದಾಖಲಿಸಿದ್ದಾರೆ. ಇವರ ವರದಿ ಎದುರು ನೋಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಈಗ ಪೊರೈಕೆಯಾದ ಶೂ ಸಾಕ್ಸ್‌ ವಿತರಿಸದಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎನ್ನುತ್ತಾರೆ ಶಾಸಕ ಕೃಷ್ಣನಾಯ್ಕ.

ಕಳೆದ ಮೂರು ವರ್ಷದಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಲಿಬರ್ಟಿ ಕಂಪನಿಯ ಶೂ ಮತ್ತು ಸಾಕ್ಸ್‌ ವಿತರಣೆ ಮಾಡಿದ್ದೇವೆ. ಆದರೆ ಈ ಬಾರಿ ಯಾವುದೇ ಕಂಪನಿ ಹೆಸರೇ ಇಲ್ಲದ ಅತಿ ಕಳಪೆ ಗುಣಮಟ್ಟದ ಶೂ ಪೂರೈಕೆ ಮಾಡಿದ್ದಾರೆ. ಆದರಿಂದ ಸರ್ಕಾರ ಈ ಕೂಡಲೇ ಗುತ್ತಿಗೆದಾರನ ಮೇಲೆ ಕ್ರಮ ವಹಿಸಿ ಈಗ ಪೂರೈಕೆಯಾಗಿರುವ ಶೂ ವಾಪಸ್‌ ಪಡೆದು ಲಿಬರ್ಟಿ,ವಿಕೆಸಿ ಮತ್ತು ಪ್ಯಾರಾಗಾನ್‌ ಕಂಪನಿ ಉತ್ಪಾದನೆಯ ಶೂ ಮತ್ತು ಸಾಕ್ಸ್‌ ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬಿಇಒ ಕಚೇರಿ ಶೂ ಗೋದಾಮು..!: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸರ್ಕಾರಿ ಕಚೇರಿಯೋ ಅಥವಾ ವಸ್ತುಗಳ ಸಂಗ್ರಹಗಾರದ ಗೋದಾಮುವೋ ಗೊತ್ತಾಗುತ್ತಿಲ್ಲ, ಸರ್ಕಾರಿ ಶಾಲೆಗಳಿಗೆ ಪೂರೈಕೆಯಾಗುವ ಸಮವಸ್ತ್ರ, ಪುಸ್ತಕ ಮತ್ತು ಶೂ ಸಾಕ್ಸ್‌ ಸಂಗ್ರಹಿಸಿ ಇಡಲು ಗೋದಾಮು ಇಲ್ಲದ ಕಾರಣ ಎಲ್ಲ ವಸ್ತುಗಳನ್ನು ಬಿಇಒ ಕಚೇರಿಯಲ್ಲೇ ಇಡಲಾಗುತ್ತಿದೆ.

ಕಳೆದ ಒಂದು ವಾರದಿಂದ ಕಚೇರಿಯಲ್ಲೇ ಶೂ ಮತ್ತು ಸಾಕ್ಸ್‌ ಕೊಳೆಯುತ್ತಿವೆ. ಕಚೇರಿಯಲ್ಲಿ ಕುಳಿತುಕೊಳ್ಳಲು ಆಗದಷ್ಟು ದುರ್ವಾಸನೆ ಇದೆ. ಕಚೇರಿಗೆ ಬರುವವರು ಮೂಗು ಮುಚ್ಚಿಕೊಂಡು ಬರುವ ಸ್ಥಿತಿ ಇದೆ. ಕಚೇರಿಯ ಎಲ್ಲ ಕಡೆಗೂ ಶೂಗಳಿಂದ ತುಂಬಿಕೊಂಡಿದೆ.

ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ ಪೂರೈಕೆಯಾಗಿವೆ. ಆದರೆ ನಮಗೆ ಇನ್ನು ಗುತ್ತಿಗೆದಾರರು ಹಸ್ತಾಂತರಿಸಿಲ್ಲ, ಒಳ್ಳೆಯ ಕಂಪನಿಯ ಗುಣಮಟ್ಟದ ಶೂ ವಿತರಣೆ ಮಾಡಬೇಕೆಂದು ಶಾಸಕರು ಸೂಚಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ. ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಯಿಂದ ದೈಹಿಕ, ಮಾನಸಿಕ ಬೆಳವಣಿಗೆ: ಶಿವಶೇಖರ್
ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 77.45 ಲಕ್ಷ ರು. ಲಾಭ