ರಾಣಿಬೆನ್ನೂರು: ದಶಕಗಳಿಂದ ಆಗದ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಸಾವಿರಾರು ಬಡಕುಟುಂಬಗಳ ಕನಸು ಈಡೇರಿದಂತಾಗುತ್ತದೆ. ಬಿ-ಖಾತಾ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕಾದ ಅವಶ್ಯಕತೆಯಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಕಂದಾಯ ಭೂಮಿ ಹಾಗೂ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಆಗದ ಬಡಾವಣೆಗಳಲ್ಲಿ ನಿವೇಶನ ಹೊಂದಿರುವರು, ಮನೆ ಕಟ್ಟಿಕೊಂಡವರಿಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರ ಬಿ-ಖಾತಾ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಹಲವು ವರ್ಷಗಳಿಂದ ನಮೂನೆ-3 ಸಿಗದೇ ಅತಂತ್ರ ಸ್ಥಿತಿಯಲ್ಲಿದ್ದ ಬಡ, ಮಧ್ಯಮ ವರ್ಗದವರಿಗೆ ಇದರಿಂದ ದೊಡ್ಡ ಉಪಕಾರ ಆಗಲಿದೆ. ನಗರಸಭೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಜನರಿಗೆ ಅಭಿಯಾನದ ಕುರಿತು ಸೂಕ್ತ ತಿಳಿವಳಿಕೆ ನೀಡಿ ಯೋಜನೆಯ ಸದುಪಯೋಗ ಪಡೆಯಲು ತಿಳಿಸಬೇಕು ಎಂದರು.
ಮೇ 10ರ ವರೆಗೆ ಇ-ಖಾತಾ ಅಭಿಯಾನ ನಡೆಯಲಿದ್ದು, ಅದರ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲು ಆಗುವುದಿಲ್ಲ. ನಿಗದಿತ ದಿನದ ನಂತರ ತಂತ್ರಾಂಶ ಕೊನೆಗೊಳ್ಳಲಿದ್ದು, ತಮ್ಮ ಆಸ್ತಿಗಳಿಗೆ ಖಾತೆ ಹೊಂದಬೇಕು. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ಇ-ಖಾತಾ ನೀಡುವ ಪ್ರಕ್ರಿಯೆ ಮುಗಿಯಲಿದೆ ಎಂದರು.ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು.
ಅನಧಿಕೃತ ಆಸ್ತಿಗಳಿಗೆ ಮೊದಲನೇ ಬಾರಿಗೆ ತೆರಿಗೆಯ ಎರಡು ಪಟ್ಟು ವಿಧಿಸಲಾಗುವುದು. ಆನಂತರದ ವರ್ಷದಲ್ಲಿ ನಿಯಮಿತ ತೆರಿಗೆಯನ್ನು ತುಂಬಬೇಕು ಎಂದರು.