ಕಾಳಜಿ ಕೇಂದ್ರಕ್ಕೆ ಶಾಸಕ ಮಂತರ್‌ ಗೌಡ ಭೇಟಿ

KannadaprabhaNewsNetwork |  
Published : Aug 02, 2025, 12:15 AM IST
ಚಿತ್ರ : 1ಎಂಡಿಕೆ1 : ಶಾಸಕರಾದ ಡಾ.ಮಂತರ್ ಗೌಡ ಅವರು ಸಂತ್ರಸ್ತರಿಗೆ ಊಟ ಬಡಿಸಿದರು.  | Kannada Prabha

ಸಾರಾಂಶ

ಮಡಿಕೇರಿ ನಗರದ ರೆಡ್‌ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಶಾಸಕ ಡಾ.ಮಂತರ್ ಗೌಡ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು. ತಡೆಗೋಡೆ ಬಿರುಕು ಬಿಟ್ಟಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಕಾಳಜಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು.

ಸಂತ್ರಸ್ತರ ಅಹವಾಲು ಆಲಿಸಿದ ಶಾಸಕ । ಮನೆ ಒದಗಿಸುವ ಭರವಸೆಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ರೆಡ್‌ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಶಾಸಕ ಡಾ.ಮಂತರ್ ಗೌಡ ಶುಕ್ರವಾರ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.ನಗರದ ಸಮೀಪದಲ್ಲಿರುವ ತಡೆಗೋಡೆ ಬಳಿ 5 ಕುಟುಂಬಗಳು ರೆಡ್‌ಕ್ರಾಸ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿರುವ ಹಿನ್ನೆಲೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಆಲಿಸಿದರು.ತಡೆಗೋಡೆ ಬಿರುಕು ಬಿಟ್ಟಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಕಾಳಜಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು.ಈಗಾಗಲೇ 2018 ಮತ್ತು 2019ರಲ್ಲಿ ಸಂತ್ರಸ್ತರಿಗೆ ಮನೆ ನೀಡಿರುವ ಜಾಗದಲ್ಲಿ ಮನೆ ಖಾಲಿ ಇದ್ದಲ್ಲಿ, ಮನೆ ಒದಗಿಸುವ ಸಂಬಂಧ ಪರಿಶೀಲಿಸಿ ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಶಾಸಕರು ಸಲಹೆ ನೀಡಿದರು.ಇಂತಹ ಕುಟುಂಬಗಳು ಸಂತ್ರಸ್ತ ಕುಟುಂಬಗಳ ಮನೆ ಪಟ್ಟಿಯಿಂದ ಏಕೆ ಕೈಬಿಟ್ಟಿವೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ ಮರು ಪರಿಶೀಲಿಸಿ ಮನೆ ನೀಡಲು ಕ್ರಮವಹಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ಸಲಹೆ ನೀಡಿದರು. ಕಾಳಜಿ ಕೇಂದ್ರಕ್ಕೆ ಶಾಸಕರು ಭೇಟಿ ನೀಡುತ್ತಿದ್ದಂತೆ ಅಳಲು ತೋಡಿಕೊಂಡ ಸಂತ್ರಸ್ತರಾದ ರತ್ನಮ್ಮ, ನಮ್ಮ 5 ಕುಟುಂಬದವರಿಗೆ ಮನೆಯಾದರೆ ಸಾಕು, ಇನ್ನೇನೂ ಬೇಡ, ಇಲ್ಲಿನ ಐದು ಕುಟುಂಬಗಳು ಕೋಳಿ, ಹಂದಿ ಸಾಕಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದು ದುಃಖಿತರಾದರು.

ಈ ಸಂದರ್ಭದಲ್ಲಿ ಧೈರ್ಯ ಹೇಳಿದ ಶಾಸಕರು, ನಿಮ್ಮ ಅಳಲು ನಮಗೆ ಸಂಕಟ ತರುತ್ತದೆ. ಆದ್ದರಿಂದ ಮನೆ ಒದಗಿಸಲು ಪ್ರಯತ್ನಿಸಲಾಗುವುದು. ಸದ್ಯ ಮುನ್ನೆಚ್ಚರ ವಹಿಸಬೇಕಿರುವುದರಿಂದ ಕಾಳಜಿ ಕೇಂದ್ರದಲ್ಲಿ ಇರುವಂತೆ ಕೋರಿದರು. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುನ್ನೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.ಮಾನವೀಯ ದೃಷ್ಟಿಯಿಂದ ಪ್ರತಿಯೊಬ್ಬರ ಜೀವ ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾಳಜಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು. ಬದಲಿ ಜಾಗ/ನಿವೇಶನ, ಮನೆ ನೀಡಿದಲ್ಲಿ ಈಗಿರುವ ಜಾಗವನ್ನು ಬಿಡಬೇಕು ಎಂದು ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು.ಇದೇ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಅಡುಗೆಗೆ ಬೇಕಾದ ಸಾಮಗ್ರಿಗಳು, ಬೆಡ್‌ಶೀಟ್, ಟಾರ್ಪಲ್ ಹಾಗೂ ಕೊಡೆ ಮತ್ತಿತರ ಒಳಗೊಂಡ ಕಿಟ್‌ನ್ನು ಶಾಸಕ ಡಾ.ಮಂತರ್ ಗೌಡ ವಿತರಿಸಿದರು.ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಡಾ.ಮಂತರ್ ಗೌಡ, ಈಗಾಗಲೇ ಹಂಚಿಕೆ ಮಾಡಲಾಗಿರುವ ಮನೆಗಳನ್ನು ಮರು ಪರಿಶೀಲಿಸುವಂತಾಗಬೇಕು. ಜೊತೆಗೆ ಇನ್ಫೋಸಿಸ್ ಸಂಸ್ಥೆಯ ಮನೆ ಸಹ ಬಳಸಿಕೊಳ್ಳುವಂತಾಗಬೇಕು. ಇಂತಹ ಸಂತ್ರಸ್ತರಿಗೆ ಕೂಡಲೇ ಮನೆ ಒದಗಿಸುವಂತಾಗಬೇಕು ಎಂದು ಹೇಳಿದರು.ಹೆಚ್ಚಿನ ಮಳೆಯಿಂದ ತೊಂದರೆಗೆ ಸಿಲುಕಿರುವವರು ಹತ್ತಿರದ ಗ್ರಾ.ಪಂ. ಅಥವಾ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭ ಶಾಸಕ ಡಾ.ಮಂತರ್ ಗೌಡ ಅವರು ಸಂತ್ರಸ್ತರಿಗೆ ಊಟ ಬಡಿಸಿದರು. ನಂತರ ಶಾಸಕರು, ಹೆಚ್ಚುವರಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಸಂತ್ರಸ್ತರ ಜತೆ ಊಟ ಸವಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಅವರು ಮಾತನಾಡಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯು ಪ್ರಾಕೃತಿಕ ವಿಕೋಪ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಾ ಬಂದಿದೆ ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ಶ್ರೀಧರ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಎಚ್.ಟಿ.ಅನಿಲ್, ಕಾರ್ಯದರ್ಶಿ ಧನಂಜಯ, ರೆಡ್‌ಕ್ರಾಸ್ ಸಂಸ್ಥೆಯ ಉತ್ತಯ್ಯ, ತೆನ್ನಿರಾ ಮೈನಾ, ಪ್ರಮುಖರಾದ ಜಗದೀಶ್, ಪ್ರಕಾಶ್ ಆಚಾರ್ಯ, ಪ್ರಭು ರೈ, ಮುದ್ದುರಾಜ್, ಸದಾಮುದ್ದಪ್ಪ, ಮೀನಾಜ್, ರವಿಗೌಡ, ನಗರಸಭೆ ಎಂಜಿನಿಯರ್‌ಗಳಾದ ಸತೀಶ್, ಹೇಮಂತ್ ಕುಮಾರ್, ತಾಹಿರ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ