ಕುಷ್ಟಗಿ: ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾರ್ಯಕರ್ತರು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟಿಸಲು ಮುಂದಾಗಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜನರ ಮನಸ್ಸನ್ನು ಗೆಲ್ಲುವ ರೀತಿಯಲ್ಲಿ ಕೆಲಸ ಮಾಡಬೇಕು, ಅಂದಾಗ ಮಾತ್ರ ಪಕ್ಷಕ್ಕೆ ಯಶಸ್ಸು ಲಭಿಸಲಿದೆ. ಜನರೊಂದಿಗೆ ನಿಕಟ ಸಂಪರ್ಕ ಹೊಂದುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಬರುವಂತಹ ಜಿಪಂ ಹಾಗೂ ತಾಪಂ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕರ್ತರು ಸಂಘಟಿತವಾಗಿ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.ಪ್ರಶಿಕ್ಷಣ ವರ್ಗದ ಉದ್ದೇಶ ಕುರಿತು ಪಕ್ಷದ ತತ್ವ,ಸಿದ್ಧಾಂತ ಹಾಗೂ ಸಂಘಟನಾ ಬಲವನ್ನು ವೃದ್ಧಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಹೇಳಿದ ಅವರು, ಗ್ರಾಮ ಮಟ್ಟದಿಂದಲೇ ಪಕ್ಷ ಬಲಪಡಿಸಲು ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಮಾಜಿ ಜಿಪಂ ಸದಸ್ಯ ಕೆ. ಮಹೇಶ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕಾರ್ಯಕ್ರಮದ ಉದ್ದೇಶ ವಿವರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಮಹಾಂತೇಶ ಬಾದಾಮಿ, ರಾಜ್ಯ ಉಪಾಧ್ಯಕ್ಷ ವಿಜಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಹೆಸರೂರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.