ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಕ್ರೀಡೆ ಯಾವುದೇ ಇರಲಿ ಅದರಲ್ಲಿ ಕೊಡವ ಜನಾಂಗದಿಂದ ಒಬ್ಬ ಕ್ರೀಡಾಪಟು ಇದ್ದೇ ಇರುತ್ತಾರೆ. ಇದು ಕ್ರೀಡಾ ಸಾಧಕರ ಪರಂಪರೆಯಾಗಿ ಬಂದಿದೆ. ಕ್ರೀಡೆ ಹಾಗೂ ಸೇನೆಯಲ್ಲಿ ಕೊಡವ ಜನಾಂಗದ ಸಾಧನೆಯಿಂದ ಇಂದು ಹೆಸರು ಗಳಿಸಿದ್ದೇವೆ, ಈ ಪರಂಪರೆಯನ್ನು ನಾವು ಮುಂದೆಯೂ ಮುಂದುವರಿಸಿಕೊಂಡು ಹೋಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.ಹುದಿಕೇರಿ ಕೊಡವ ಸಮಾಜದಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿರುವ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾಳಿಯ ಲಾಂಛನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಹಳ ಸುಂದರವಾದ ಲಾಂಛನ ಇದಾಗಿದ್ದು ನೋಡಲು ಸಂತೋಷವಾಗುತ್ತದೆ. ಗಂಡು ಐನ್‌ಮನೆ ಸಾಂಸ್ಕೃತಿಕ ಹಿರಿಮೆಯನ್ನು ಮತ್ತು ಹೆಣ್ಣು ಗಂಡು ಇರುವ ಈ ಲಾಂಛನ ಬದುಕಿನಲ್ಲಿ ಸಮಪಾಲು ಎಂಬುದನ್ನು ಬಿಂಬಿಸುತ್ತದೆ ಎಂದು ವಿಶ್ಲೇಸಿದರು.ಚೆಕ್ಕೇರ ಕುಟುಂಬದ ಬಗ್ಗೆ ಹೇಳಲು ಸಾಕಷ್ಟಿದೆ. ಈ ಕುಟುಂಬದ ಹಲವಾರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಚೆಕ್ಕೇರ ಪೂವಯ್ಯ ಮತ್ತು ರಾಜ್ಯ ಸರಕಾರ ವಾದದಲ್ಲಿ ಜಮ್ಮ ಬಾಣೆಯ ಹಿಡುವಳಿದಾರರಲ್ಲಿ ಉಳಿಯಲು ಎ. ಕೆ. ಸುಬ್ಬಯ್ಯ ಅವರ ಮೂಲಕ ಚೆಕ್ಕೇರ ಪೂವಯ್ಯ ವಕಾಲತ್ತು ಹಾಕಿ ಗೆಲುವು ಸಾಧಿಸಿದ್ದು ಕೊಡಗಿಗೆ ನೀಡಿದ ದೊಡ್ಡ ಕೊಡುಗೆ ಎಂದರು.
2002ರಲ್ಲಿ ಚೆಕ್ಕೇರ ಕುಟುಂಬ ಆಯೋಜಿಸಿದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ನಂತರ ಹುದಿಕೇರಿಯಲ್ಲಿ ಇದೀಗ ದೊಡ್ಡ ಮಟ್ಟದ ಕ್ರೀಡಾಕೂಟ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಮೂಲಕ ಆಯೋಜಿಸಲಾಗುತ್ತಿದೆ. ಇಂತಹ ಪಂದ್ಯಾವಳಿ ನಡೆಸುವುದು ಹೆಮ್ಮೆಯ ವಿಚಾರ. ಕಳೆದ ಬಾರಿ ನಡೆದ ಕೊಡವ ಕೌಟುಂಬಿಕ ಹಾಕಿ ಹಬ್ಬ ಕುಂಡಿಯೋಳಂಡ ವಿಶ್ವ ದಾಖಲೆ ಬರೆಯಿತು. ಹಾಗೆಯೇ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟವು ವಿಶ್ವದಾಖಲೆ ಬರೆಯಲಿ ಎಂದು ಆಶಿಸುತ್ತೇನೆ ಎಂದು ಪೊನ್ನಣ್ಣ ಹೇಳಿದರು.ರಾಜ್ಯ ಸರಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕ ತೀತಿರ ರೋಷನ್ ಅಪ್ಪಚ್ಚು ಮಾತನಾಡಿ, ಕೊಡಗಿನಲ್ಲಿ ಈಗ ಕ್ರೀಡಾಕೂಟದ ಸಮಯ. ಕೊಡಗು ಚಿಕ್ಕ ಜಿಲ್ಲೆಯಾದರೂ ಕ್ರೀಡೆ ಹಾಗೂ ಸೇನೆಗೆ ಹಲವಾರು ಪ್ರತಿಭೆಗಳನ್ನು ನೀಡಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕ್ರೀಡೆ ಎನ್ನುವುದು ಆಂತರಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಬೆಳೆಸುತ್ತದೆ. ಇದರಿಂದ ಬೇರೆ ಬೇರೆ ರೀತಿಯ ಕೌಶಲ್ಯವನ್ನು ಅರಿತುಕೊಳ್ಳಬಹುದು. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.ಚೆಕ್ಕೇರ ಕಪ್ ಪಂದ್ಯಾವಳಿ ಅಧ್ಯಕ್ಷ ಚಂದ್ರಪ್ರಕಾಶ್ ಮಾತನಾಡಿ ಕೊಡಗು ಜಿಲ್ಲೆಯ ನೆಲ ಗಾಳಿ ನೀರು ಪರಿಸರ ಮಳೆ ಬೆಳೆಯ ಆರಾಧಕರಾದ ಅತ್ಯಮೂಲ್ಯವಾದ ವಿಶೇಷ ಜನಾಂಗ ಕೊಡವ ಜನಾಂಗ. ನಮ್ಮ ಉಳಿವಿಗಾಗಿ ಇರುವ ಚಿಕ್ಕ ಕೊಡುಗೆ ಈ ಕೌಟುಂಬಿಕ ಕ್ರೀಡಾಕೂಟ. ಅದರಲ್ಲಿಯೂ ಈ ಕ್ರಿಕೆಟ್ ಹಬ್ಬ ವಿಶೇಷವಾದದ್ದು. ಆಟದ ವಿಷಯದಲ್ಲಿ ನಾವೆಲ್ಲ ಒಂದೇ ಕುಟುಂಬ ಎಂಬ ಸಂದೇಶವನ್ನು ಸಮಾಜಕ್ಕೆ ನೀಡುವ ಗುರಿ ಹೊಂದಿ ಕ್ರೀಡಾಕೂಟದಲ್ಲಿ ಭಾಗವಹಿಸುತ್ತೇವೆ. ಈ ಕ್ರೀಡಾಕೂಟದ ಮೂಲಕ ಜನಾಂಗದಲ್ಲಿ ಒಗ್ಗಟ್ಟು, ಪ್ರೀತಿ ವಿಶ್ವಾಸ, ಬಾಂಧವ್ಯ ಬಲಗೊಳ್ಳಲು ವೇದಿಕೆಯಾಗಲಿ ಎಂದರು.
ಅಂಜಿಗೇರಿ ನಾಡ್ ತಕ್ಕ ಚೆಕ್ಕೇರ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಕ್ರಿಕೆಟ್ ಪಂದ್ಯಾವಳಿಯ ವೆಬ್‌ಸೈಟನ್ನು ಕುಟುಂಬದ ಅಧ್ಯಕ್ಷರಾದ ಕಾಶಿಕಾಳಯ್ಯ ಅನಾವರಣಗೊಳಿಸಿದರು. ಕುಟುಂಬದ ದಾಖಲೆಗಳನ್ನು ತಕ್ಕ ರಾಜೇಶ್ ಬಿಡುಗಡೆ ಮಾಡಿದರು. ಕುಟುಂಬದ ಪಟ್ಟೆದಾರ ಕಟ್ಟಿ ಕುಟ್ಟಣಿ ಹಾಜರಿದ್ದರು.
.............ಚೆಕ್ಕೇರ ಕುಟುಂಬದ ವಿಶೇಷತೆ
ತಾತಂಡ ಮತ್ತು ಅಳಮೇಂಗಡ ಕುಟುಂಬದ ನಂತರ ಕೌಟುಂಬಿಕ ಹಾಕಿ ಹಾಗೂ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿದ ಮೂರನೇ ಕುಟುಂಬವೆಂಬ ಹೆಗ್ಗಳಿಕೆ ಚೆಕ್ಕೇರ ಕುಟುಂಬದ್ದು. 8 ಬಾರಿ ಕೌಟುಂಬಿಕ ಕ್ರಿಕೆಟ್‌ನಲ್ಲಿ ಚಾಂಪಿಯನ್ ಆಗಿರುವ ಚೆಕ್ಕೇರ ಕುಟುಂಬ ತಂಡದಿಂದ ಪಂದ್ಯಾವಳಿ ಆಯೋಜನೆ. 2002ರಲ್ಲಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ ನಂತರ ಮತ್ತೆ 13 ವರ್ಷಗಳ ನಂತರ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವ ಕುಟುಂಬ. ಪಂದ್ಯಾವಳಿಯಲ್ಲಿ ಸಾಹಿತಿಗಳಿಗೆ ಉತ್ತೇಜನ ನೀಡಲು ಸಾಹಿತ್ಯ ಆಹ್ವಾನ, ನಗದು ಬಹುಮಾನ ನಿಗದಿ.ಪುಸ್ತಕ ಬುಡುಗಡೆ: ಇದೇ ವೇದಿಕೆಯಲ್ಲಿ ಪಂಚ ಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ರಚಿಸಿದ ‘ಪಾನೆಲಚಿಲ್ ಪೊನ್ನೆಳ್ತ್’ ಪುಸ್ತಕವನ್ನು ಶಾಸಕ ಎ.ಎಸ್. ಪೊನ್ನಣ್ಣ ಬಿಡುಗಡೆ ಮಾಡಿದರು. ಚೆಕ್ಕೇರ ಪಂಚಮ್ ತ್ಯಾಜರಾಜ್ ಅವರು ರಚಿಸಿದ ಪಂದ್ಯಾವಳಿಯ ಹಾಡು ಬಿಡುಗಡೆ ಆಯಿತು. ಚೆಕ್ಕೇರ ವಾಣಿ ಸಂಜು ಪ್ರಾರ್ಥಿಸಿದರು. ಅಧ್ಯಕ್ಷ ಚಂದ್ರ ಪ್ರಕಾಶ್ ಸ್ವಾಗತಿಸಿದರು. ಚೋಕಿರ ಅನಿತಾ ದೇವಯ್ಯ, ನೇರ್ಪಂಡ ಹರ್ಷ ಮಂದಣ್ಣ ನಿರೂಪಿಸಿದರು. ಚೆಕ್ಕೇರ ನಿರೂಪ ವಂದಿಸಿದರು.