ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೆಂಪೇಗೌಡ ಜಯಂತಿಯಲ್ಲಿ ನಡೆದ ಗಲಭೆಯ ಕುರಿತು ಹಮ್ಮಿಕೊಳ್ಳಲಾಗಿದ್ದ ಬಿಜೆಪಿ- ಜೆಡಿಎಸ್ ಮುಖಂಡರ ಜಂಟಿ ಸಭೆಯಲ್ಲಿ ಮಾತನಾಡಿ, ಕೆಂಪೇಗೌಡ ಜಯಂತಿ ವೇಳೆ ನಡೆದ ಗದ್ದಲ- ಗೊಂದಲ ಹಾಗೂ ಗಲಾಟೆಗೆ ಮುಖ್ಯವಾಗಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಆತನ ಪ್ರಚೋದನೆಯೇ ಇದಕ್ಕೆಲ್ಲಾ ಕಾರಣವಾಗಿದ್ದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ರೈತರ ಮಕ್ಕಳು, ಸಮುದಾಯದ ಮಕ್ಕಳನ್ನು ಬಂಧಿಸಿ ಜೈಲಿಗೆ ಕಳಿಸುತ್ತಿರುವುದನ್ನು ಖಂಡಿಸಿದರು.
ನಾವು ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಶಾಂತಿ, ಸುವ್ಯವಸ್ಥೆ ಕೆಡುವುದಕ್ಕೆ ಅವಕಾಶಕೊಡಬಾರದು. ಇಲ್ಲಿ ಒಕ್ಕಲಿಗರು ಮತ್ತು ಬಲಜಿಗರು ಅಣ್ಣ- ತಮ್ಮಂದಿರಂತೆ ಇದ್ದೇವೆ. ಯಾವುದೇ ಕಾರಣಕ್ಕೂ ಇಬ್ಬರ ಮಧ್ಯೆ ಸಾಮರಸ್ಯ ಕದಡುವುದಕ್ಕೆ ಬಿಡುವುದಿಲ್ಲ. ಸಭೆಯಲ್ಲಿ ಒಕ್ಕಲಿಗ ಮತ್ತು ಬಲಿಜಿಗ ಪ್ರಮುಖ ಮುಖಂಡರುಗಳನ್ನು ಕರೆಸಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿ ಪೊಲೀಸ್ ವ್ಯವಸ್ಥೆ ವಿರುದ್ಧ ಹೋರಾಡಲು ತೀರ್ಮಾನ ತಗೆದುಕೊಳ್ಳಲಾಗಿದೆ ಎಂದರು.ಇಲ್ಲಿನ ಶಾಸಕ ಪ್ರದೀಪ್ ಈಶ್ಬರ್ ಎಡಬಿಡಂಗಿ , ಆತನ ಕೋತಿ ಚೇಷ್ಟೆಯಿಂದಲೇ ಇಷ್ಟೊಂದು ಗಲಾಟೆಗೆ ಕಾರಣವಾಗಿದೆ. ನಿನ್ನೆ ಪ್ರೋಟೋಕಾಲ್ ಬಿಟ್ಟು ಕಾಂಗ್ರೆಸ್ ಪುಡಾರಿಗಳನ್ನೆಲ್ಲಾ ಯಾಕೆ ವೇದಿಕೆ ಮೇಲೆ ಬಿಟ್ಟಿದ್ದರು. ಕೆಂಪೇಗೌಡ ಜಯಂತಿಗೆ ಬಂದವರನ್ನೇ ಕನ್ನಡ ಭವನದ ಒಳಗೆ ಬಿಡದೆ ಅಡ್ಡ ಹಾಕಿದ್ದು ಯಾಕೆ. ಸಮಾರಂಭ ನಂತರ ನಡೆದ ಎಲ್ಲಾ ಪ್ರಕ್ರಿಯೆಗಳು ಶಾಸಕ ಪ್ರದೀಪ್ ಈಶ್ವರ್ ಮಾಡಿದ ತಂಟೆಗಳೆ ಆಗಿವೆ. ಒಳಗಡೆ ಸಮಾರಂಭದಲ್ಲಿ ಬೆಕ್ಕಿನಂತೆ ಕೂತಿದ್ದ ಪ್ರದೀಪ್ ಹೊರಗಡೆ ಉತ್ತರಕುಮಾರನ ಪೌರುಷ ತೋರಿಸೋದು ಎಷ್ಟು ಸರಿ. ಇದಕ್ಕೆಲ್ಲಾ ಜಿಲ್ಲಾಡಳಿತ ಯಾಕೆ ಅನುಮತಿ ನೀಡಿದ್ದು. ಇಷ್ಟೆಲ್ಲಾ ಗಲಾಟೆಗೆ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತವೇ ಕಾರಣ ಎಂದು ಆರೋಪಿಸಿದರು.