ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯಾರ್ಥಿಗಳಿಗೆ ಗುಲಾಬಿ ಹೂವು, ಸಿಹಿ ನೀಡಿ ಶಾಲೆಗೆ ಬರಮಾಡಿಕೊಂಡ ಶಾಸಕರು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿರಿಯ ಪ್ರಾಥಮಿಕ ಶಾಲೆಯು ಪ್ರೌಢಶಾಲೆಗೆ ಉನ್ನತೀಕರಣವಾಗಲಿದ್ದು ಎಸ್ಸೆಸ್ಸೆಲ್ಸಿ ವರೆಗೆ ವ್ಯಾಸಂಗ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಬ್ಯಾಡಮೂಡ್ಲುವಿನಲ್ಲೂ ಎಸ್ಸೆಸ್ಸೆಲ್ಸಿ ವರೆಗೆ ಓದಲು ಅನುಕೂಲ ಕಲ್ಪಿಸಲಾಗುತ್ತದೆ. ಶಾಲೆಗಳ ಅಭಿವೃದ್ದಿಗೆ ಹೆಚ್ಚಿನ ನೆರವು ಸಹಕಾರ ನೀಡಲಾಗುತ್ತದೆ ಎಂದರು.
ಈ ಶಾಲೆಯಲ್ಲಿ ಪ್ರಸ್ತುತ ಎಲ್‌ಕೆಜಿಯಿಂದ ೭ನೇ ತರಗತಿವರೆಗೆ ಆಂಗ್ಲಭಾಷೆ ಬೋಧನೆಗೂ ಅವಕಾಶವಿದ್ದು, ದಾಖಲಾತಿ ನಡೆಯುತ್ತಿದೆ. ಶಾಲೆಗೆ ಮತ್ತಷ್ಟು ಕಟ್ಟಡ ಇನ್ನಿತರ ಸೌಲಭ್ಯಗಳು ಅನುದಾನ ಬರಲಿವೆ. ಪೋಷಕರು ಶಾಲೆಯ ಅಭಿವೃದ್ದಿ ಸಂಬಂಧ ಸಲಹೆಗಳನ್ನು ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸಬೇಕು ಎಂದರು.ವಿದ್ಯೆಯಿಂದ ಮಾತ್ರ ಎಲ್ಲ ಸಾಧನೆ ಸಾಧ್ಯ. ವಿದ್ಯಾವಂತರಾಗದಿದ್ದರೆ ಮಕ್ಕಳ ಮುಂದಿನ ಭವಿಷ್ಯಕ್ಕೆ ತೊಡಕಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು. ಶೈಕ್ಷಣಿಕ ಸೌಲಭ್ಯಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಶೆಟ್ಟಿ, ಶಾಲಾ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೂಸಣ್ಣ ಸ್ವಾಮಿ, ಮುಖ್ಯ ಶಿಕ್ಷಕರಾದ ವೆಂಕಟೇಶ ನಾಯಕ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಹೇಮ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಿಕ್ಕಬಸವಯ್ಯ, ಬಡಾವಣೆಯ ಯಜಮಾನರಾದ ನಾಗಶೆಟ್ಟಿ, ಮಸಣಶೆಟ್ಟಿ, ಕೆ.ಟಿ. ನಾಗಶೆಟ್ಟಿ, ಪೈಲ್ವಾನ್ ನಂಜಪ್ಪ, ಚನ್ನಿಗಶೆಟ್ಟಿ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.