ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ
ಈ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಬರೀ ತಾಲೂಕಿಗೆ ಸೀಮಿತವಾದ ರಾಜಕಾರಣಿಯಲ್ಲ. ಈ ರಾಜ್ಯದ ಜನತೆ ಮೆಚ್ಚಿದ ಅಭಿವೃದ್ಧಿಯ ಜನನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಸೋಮವಾರ ರಾತ್ರಿ ಯಲಬುರ್ಗಾ-ಕುಕನೂರು ತಾಲೂಕು ಆಡಳಿತ ಮತ್ತು ಯಲಬುರ್ಗಾ ವಿಧಾನಸಭಾ ಶಾಸಕರ ಕಾರ್ಯಾಲಯದ ಸಹಯೋಗದಲ್ಲಿ ನಾನಾ ಗ್ರಾಮಗಳ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ, ಜಮೀನುಗಳ ಪಹಣಿ ಪತ್ರಿಕೆ ಹಾಗೂ ಅಂಗವಿಕಲರಿಗೆ ತ್ರಿ-ಚಕ್ರ ವಾಹನ ವಿತರಣೆ, ಯಲಬುರ್ಗಾ ತಾಲೂಕು ಅಭಿವೃದ್ಧಿ ಸುವರ್ಣ ಯುಗ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ರಾಜ್ಯದ ಶಾಸಕರು, ಸಚಿವರು ಬಸವರಾಜ ರಾಯರಡ್ಡಿ ಅವರ ಜನಪರ ಅಭಿವೃದ್ಧಿ ನೋಡಿ ಕಲಿಯಬೇಕಾಗಿದ್ದು ಬಹಳಷ್ಟಿದೆ ಎಂದರು.ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ನೀಡುವ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸಂಪುಟದಲ್ಲಿ ರಾಯರಡ್ಡಿ ಸಚಿವರಾಗಬೇಕಿತ್ತು. ಆದರೂ ಎದೆಗುಂದದೆ ಅಭಿವೃದ್ಧಿಯ ಚಿಂತನೆಯಿಟ್ಟುಕೊಂಡು ತಮ್ಮ ಜೀವನದ್ದಕ್ಕೂ ರಾಜ್ಯದಲ್ಲಿಯೇ ಜನಮೆಚ್ಚುಗೆ ಪಡೆದುಕೊಂಡ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಇನ್ನೂ ರಾಯರಡ್ಡಿ ಹೋರಾಟಗಾರ, ಹಿಡಿದ ಕೆಲಸವನ್ನು ಮಾಡದೆ ಬಿಡಲಾರದ ಹಠವಾದಿ. ಈ ಕ್ಷೇತ್ರದಲ್ಲಿ ೬ ಬಾರಿ ಶಾಸಕನಾಗಿ, ಒಮ್ಮೆ ಸಂಸದನಾಗಿ ಮಾಡಿದ ಕಾರ್ಯ ನಿಜಕ್ಕೂ ಶ್ಲಾಘನೀಯ. ಯಾವುದರಲ್ಲೂ ಕಡಿಮೆಯಿಲ್ಲದ ಮೇರು ವ್ಯಕ್ತಿತ್ವ ಹೊಂದಿದ ರಾಯರಡ್ಡಿ ಅವರು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕೆನ್ನುವುದು ನನ್ನಾಸೆಯಾಗಿದೆ ಎಂದರು.
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಈ ಕ್ಷೇತ್ರದ ಜನತೆ ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ನಾನು ೧೯೮೫ರಿಂದ ಮೊದಲ ಶಾಸಕನಾಗಿದ್ದಾಗಿನಿಂದಲೂ ಇಲ್ಲಿಯತನಕ ಶಾಸಕ, ಸಚಿವ, ಸಂಸದನಾಗಿ ಏನು ಅಭಿವೃದ್ಧಿ ಮಾಡಿದ್ದೀನಿ ಎನ್ನುವುದನ್ನು ಈ ಸುವರ್ಣ ಯುಗವೆಂಬ ಪುಸ್ತಕದಲ್ಲಿ ನೀಡಲಾಗಿದೆ. ತಾಲೂಕಿನಲ್ಲಿ ೫೩ ಸಾವಿರ ಮನೆಗಳಿವೆ. ಈ ಪುಸ್ತಕಗಳನ್ನು ಜನರ ಮನೆ ಮನೆಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತೇನೆ ಎಂದರು.