ಶಿರಹಟ್ಟಿ: ಶಾಸಕ ಡಾ. ಚಂದ್ರು ಲಮಾಣಿ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹಿಂಸೆ ಉಂಟುಮಾಡಿದೆ. ಇದನ್ನು ನಿಲ್ಲಿಸಬೇಕು. ಮತಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ನಿಮ್ಮ ಕಿರುಕುಳದಿಂದಲೇ ಬೇಸತ್ತು ಹೋಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಎಚ್ಚರಿಸಿದರು.
ಈ ಹಿಂದೆ ಪಟ್ಟಣದಲ್ಲಿ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಭೂಮಿ ಗುರುತಿಸಿರಬಹುದು. ಆದರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ₹ ೩೭ ಕೋಟಿ ಅನುದಾನ ನೀಡಿರುವ ಕುರಿತು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಇದನ್ನು ನೆನಪಿಸಿಕೊಂಡು ಅಭಿವೃದ್ಧಿಪರ ಕೆಲಸ ಮಾಡಬೇಕು ಎಂದರು.
ಸರ್ಕಾರಿ ಕಾರ್ಯಕ್ರಮಕ್ಕೆ ನಿಮ್ಮಿಂದಲೇ ಅವಮಾನಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರು ಮತ್ತು ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ಬರುವುದು ಶೋಭೆ ತರುವಂತದ್ದಲ್ಲ. ಕಾರ್ಯಕ್ರಮಕ್ಕೆ ನೀವೇ ಅವಮಾನ ಮಾಡಿದಂತಾಗಿದೆ. ಇದು ಉದ್ಧಟತನದ ಪರಮಾವಧಿ. ನಿಮ್ಮ ಪಕ್ಷದ ಖಾಸಗಿ ಕಾರ್ಯಕ್ರಮಕ್ಕೆ ಕೇಸರಿ ಶಾಲಾದರೂ ಹಾಕಿ ಮತ್ತೊಂದಾದರೂ ಹಾಕಿಕೊಳ್ಳಿ ಅದನ್ನು ಪ್ರಶ್ನಿಸುವುದಿಲ್ಲ. ಆಡಳಿತ ಪಕ್ಷದ ಗೌರವಾನ್ವಿತ ಸಚಿವರು ಉಪಸ್ಥಿತಿ ಇರುವ ಸರ್ಕಾರಿ ಕಾರ್ಯಕ್ರಮಕ್ಕೆ ಈ ರೀತಿಯಾಗಿ ಬರುವುದು ಸಮಂಜಸವಲ್ಲ ಎಂದು ದೂರಿದರು.
ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹುಮಾಯೂನ್ ಮಾಗಡಿ ಮಾತನಾಡಿ, ಸರ್ಕಾರಿ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹಾಕಿಕೊಂಡು ಬಂದು ವೈಭವೀಕರಣ ಮಾಡುವುದನ್ನು ಶಾಸಕರು ಬಿಡಬೇಕು. ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ನಾನೇ ಮಾಡಿದ್ದೇನೆ ಎಂದು ಹೇಳಿಕೊಳ್ಳುವ ನಡವಳಿಗೆ ಕೈಬಿಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಿದರೂ ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆ ಬರುವಂತೆ ಕೆಲಸ ಮಾಡುವ ಗುತ್ತಿಗೆದಾರರಿಗೆ ಕೆಲಸ ನೀಡುವ ಬದಲು ಹೊಂದಾಣಿಕೆ ನೆಪದಲ್ಲಿ ಗುತ್ತಿಗೆದಾರರ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಕೆಲಸ ನೀಡಿದ್ದಾರೆ. ಈ ಎಲ್ಲ ದಾಖಲೆಗಳು ನಮ್ಮಬಳಿ ಇವೆ. ಈ ವ್ಯವಸ್ಥೆ ಮೊದಲು ಶಾಸಕರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಭ್ರಷ್ಟಾಚಾರ ಯಾವ ಪಕ್ಷದಲ್ಲಿ ನಡೆಯುತ್ತಿದೆ ಎಂಬುದರ ಕುರಿತಾಗಿ ವಿವರಿಸಿ ಹೇಳಬೇಕಾಗಿಲ್ಲ. ಒಂದು ಪಕ್ಷದ ಕಾರ್ಯಕರ್ತರ ಬಗ್ಗೆ ಹಫ್ತಾ ವಸೂಲಿ ಮಾಡುವ ಕುರಿತು ಹೇಳುತ್ತಿದ್ದು ನಿಖರವಾದ ಮಾಹಿತಿ ನೀಡಿದರೆ ಪಕ್ಷದ ವತಿಯಿಂದ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಬರೀ ಪ್ರಚಾರಕ್ಕಾಗಿ ಸುಳ್ಳು ಆರೋಪ ಮಾಡುವುದು ನಿಮಗೆ ಶೋಭೆ ತರುವಂತಹದ್ದಲ್ಲ ಎಂದು ತಿಳಿಸಿದರು.ಪಟ್ಟಣ ಪಂಚಾಯತ ಸದಸ್ಯ ಇಸಾಕಅಹ್ಮದ ಆದ್ರಳ್ಳಿ, ಮಂಜುನಾಥ ಘಂಟಿ, ಹಸರತ ಢಾಲಾಯತ, ದೇವಪ್ಪ ಆಡೂರ, ಮುತ್ತು ಭಾವಿಮನಿ, ಎಂ.ಕೆ. ಲಮಾಣಿ, ದೇವಪ್ಪ ಬಟ್ಟೂರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.