ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಉತ್ತರ ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ, ವಿಕಲಚೇತನ ವ್ಯಾಪಾರಿಗಳಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಹಾನಗರ ಪಾಲಿಕೆ ವ್ಯಾಪ್ತಿಯ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುವ ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ಪಡೆಯಬಾರದೆಂಬ ನಿಯಮ ಇದ್ದರೂ ಖಾಸಗಿ ಗುತ್ತಿಗೆದಾರರು ನಿಯಮ ಮೀರಿ ಭೂ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆಯೇ ವಿಕಲಚೇತನ ವ್ಯಾಪಾರಿ ಮಾರುತಿ ಕರೇಗಾರ ಎಂಬುವರು ಪಾಲಿಕೆಗೆ ಭೂ ತೆರಿಗೆ ವಸೂಲಿ ಕುರಿತು ದೂರು ನೀಡಲು ಪಾಲಿಕೆಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಬಳಿಕ ಮೇಯರ್, ಉಪಮೇಯರ್, ಶಾಸಕರು ಹಾಗೂ ಸದಸ್ಯರು ವಿಕಲಚೇತನ ವ್ಯಾಪಾರ ಮಾರುತಿ ಬಳಿ ಬಂದು, ಅವರ ಸಮಸ್ಯೆ ಆಲಿಸಿದರು. ನಿತ್ಯ ನನ್ನಿಂದ ₹20 ಭೂ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಮಾರುತಿ ಮಾಹಿತಿ ನೀಡಿದರು.ಸಭೆ ಮುಂದುವರಿದ ಬಳಿಕ ಶಾಸಕ ಆಸೀಫ್ ಸೇಠ್, ವಿಕಲಚೇತನರಿಗೆ ನಿಯಮಗಳಲ್ಲಿ ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು. ಮೇಯರ್ ಮಂಗೇಶ ಪವಾರ, ಬೀದಿಬದಿಯ ವಿಕಲಚೇತನರ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿ ಮಾಡುತ್ತಿರುವ ವಿಚಾರವಾಗಿ ಕರ ವಸೂಲಿ ಕಮಿಟಿ ಜೊತೆಗೆ ಚರ್ಚಿಸಿ, ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಉಪ ಆಯುಕ್ತೆ ರೇಷ್ಮಾ ತಾಳಿಕೋಟೆ, ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿಗೆ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ವಿಕಲಚೇತನ ವ್ಯಾಪಾರಸ್ಥರಿಂದ ಭೂ ತೆರಿಗೆ ವಸೂಲಿ ಮಾಡದಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ ಎಂದರು.
ಪಾಲಿಕೆ ನೂತನ ಆಯುಕ್ತ ಕಾರ್ತಿಕ ಅವರನ್ನು ಸ್ವಾಗತಿಸಲಾಯಿತು. ಅದರಂತೆ ನಿರ್ಗಮನ ಆಯುಕ್ತೆ ಶುಭ ಬಿ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಬೀದಿ ಬದಿಯ ವ್ಯಾಪಾರಸ್ಥರಿಗೆ ₹10 ಸಾವಿರ ಸಾಲ ನೀಡಿರುವ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಸಾಲ ವಸೂಲಾತಿಗೆ ಖಾಸಗಿ ಬ್ಯಾಂಕ್‌ಗೆ ಜವಾಬ್ದಾರಿ ನೀಡಲಾಗಿದ್ದರೂ ಯಾರೊಬ್ಬರು ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.