ಮಂಗಳೂರು: ಕೆಂಪು ಕಲ್ಲಿನ ಗಣಿಗಾರಿಕೆ ಮೇಲಿನ ರಾಜಧನ ಇಳಿಕೆಯಾಗಿದ್ದರೂ ಕೆಂಪು ಕಲ್ಲು ದರ ಮಾತ್ರ ದುಬಾರಿಯಾಗಿರುವ ಕಾರಣ ದ.ಕ. ಜಿಲ್ಲೆಯಲ್ಲಿ ಬಡವರಿಗೆ ಮನೆ ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿಲ್ಲ. ದರ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲೆಯ ಶಾಸಕರು ಆಗ್ರಹಿಸಿದ್ದಾರೆ.
ಶಾಸಕ ಉಮಾನಾಥ ಕೋಟ್ಯಾನ್ ವಿಷಯ ಪ್ರಸ್ತಾಪಿಸಿ, ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರಿಗೆ ರಾಜಧನ ಹೆಚ್ಚಳವಾಗಿದೆ ಎಂಬ ಕಾರಣದಿಂದ ನಾವೆಲ್ಲಾ ಪ್ರಯತ್ನಿಸಿ ಸರ್ಕಾರದ ಮೂಲಕ ಇಳಿಕೆ ಮಾಡಲಾಗಿದೆ. ಹಿಂದೆ ೩೦ ರು.ಗಳಿಗೆ ಸಿಗುತ್ತಿದ್ದ ಕೆಂಪುಕಲ್ಲಿನ ದರ ಪ್ರಸಕ್ತ ೫೫ ರು. ಆಗಿದೆ. ರಾಜಧನ ಕಡಿಮೆಯಾಗಿದ್ದರೂ ಕೆಂಪುಕಲ್ಲು ಪೂರೈಕೆದಾರರು ದರ ಇಳಿಕೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ಕೆಂಪು ಕಲ್ಲಿನ ದುಬಾರಿ ಬೆಲೆ ಹಾಗೂ ಮರಳಿನ ಸಮಸ್ಯೆಯಿಂದಾಗಿ ಮನೆ ಪೂರ್ಣಗೊಳಿಸಲು ಸಾಧ್ಯವಾಗದೆ ಗೃಹ ಪ್ರವೇಶ ಮಾಡಲಾಗದೆ ಸಂಕಷ್ಟ ಪಡುವಂತಾಗಿದೆ ಎಂದು ಹರೀಶ್ ಪೂಂಜಾ ಹೇಳಿದಾಗ ಇತರೆ ಶಾಸಕರು ದನಿಗೂಡಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದರ್ಶನ್, ಈಗಾಗಲೇ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರ ಅಸೋಶಿಯೇಶನ್ ಜತೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ರಾಜಧನ ದುಬಾರಿ ಇದೆ ಎಂಬ ಬೇಡಿಕೆಯ ಹಿನ್ನೆಲೆಯಲ್ಲಿ ಟನ್‌ಗೆ ೨೯೫ ರು.ಗಳಿದ್ದ ರಾಜಧನವನ್ನು ೧೦೦ ರು.ಗಳಿಗೆ ಸೀಮಿತಗೊಳಿಸಲಾಗಿದೆ. ಹಾಗಿದ್ದರೂ ದರ ಇಳಿಕೆಗೆ ಮುಂದಾಗದಿರುವುದು ಗಮನಕ್ಕೆ ಬಂದಿದೆ. ಈ ರೀತಿ ಮುಂದುವರಿದರೆ ಜಿಲ್ಲಾಡಳಿತದಿಂದ ಮುಂದೆ ಯಾವುದೇ ಸಹಕಾರ ಸಿಗದು ಎಂಬುದನ್ನು ಅಸೋಶಿಯನ್‌ನವರಿಗೆ ಸ್ಪಷ್ಟಪಡಿಸಲಾಗಿದೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.ಇಎಸ್‌ಐನಡಿ ಸಾಮಾನ್ಯ ಚಿಕಿತ್ಸೆಗೆ ತೊಂದರೆ :
ಜಿಲ್ಲಾಧಿಕಾರಿ ದರ್ಶನ್ ಮಾತನಾಡಿ, ಈ ಬಗ್ಗೆ ರಾಜ್ಯ ವೈದ್ಯಕೀಯ ಇಲಾಖೆಯ ಆಯುಕ್ತರ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಕೂಳೂರು ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಶ್ನಿಸಿದಾಗ, ಕಾಮಗಾರಿ ಆರಂಭಗೊಂಡಿರುವುದಾಗಿ ಅಧಿಕಾರಿಗಳು ಉತ್ತರಿಸಿದರು. ಅಡಿಪಾಯದ ಪ್ರಾಥಮಿಕ ಕೆಲಸಗಳು ಪೂರ್ಣಗೊಂಡಿವೆ. ಪೈಲ್ ಕ್ಯಾಪ್ ಕಾಮಗಾರಿ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಕಾಮಗಾರಿ ಮುಗಿದು ಸರ್ವಿಸ್ ರಸ್ತೆ ಕಾಮಗಾರಿಯ ಬಳಿಕ ಮಾರ್ಚ್‌ನಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಕಾಮಗಾರಿಗೆ ಹಣದ ಕೊರತೆ ಇಲ್ಲ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಜಾವೇದ್ ಅಜ್ಮಿ ಸಭೆಯಲ್ಲಿ ಮಾಹಿತಿ ನೀಡಿದರು.
ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಕರ್ಬಾರಿ, ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಆ್ಯಂಟನಿ ಮರಿಯಪ್ಪ ಇದ್ದರು.