ಶಿರಸಿ: ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ವೈದ್ಯಕೀಯ ಉಪಕರಣಗಳ ವಿಚಾರದಲ್ಲಿ ಹಣ ಕಡಿತಗೊಂಡಿರುವ ವಿಷಯವೇ ತಮಗೆ ಗೊತ್ತಿಲ್ಲ ಎಂದು ಶಾಸಕರು ಹೇಳಿದ್ದು ಶುದ್ಧ ಸುಳ್ಳು. ಈ ಕುರಿತು ಈಗಾಗಲೇ ಸಾಕಷ್ಟು ವರದಿಗಳು, ಹೋರಾಟ, ಪ್ರತಿಭಟನೆ, ಉಪವಾಸ ಸತ್ಯಾಗ್ರಹ ನಡೆಸಲಾಗಿದೆ. ಆದರೂ ಶಾಸಕರಿಗೆ ತಿಳಿದಿಲ್ಲ ಎಂಬುದು ಸತ್ಯಕ್ಕೆ ದೂರದ ಸಂಗತಿ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.ಅವರು ಮಂಗಳವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಶಾಸಕರು ಆಸ್ಪತ್ರೆಗೆ ಉಪಕರಣಗಳಿಗೆ ಅನುದಾನ ಕಡಿತಗೊಂಡಿದ್ದರ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಹೇಳಿಕೆ ನೀಡಿರುವುದು ಶುದ್ಧ ಸುಳ್ಳು. ಆದರೂ ಆಸ್ಪತ್ರೆಗೆ ಅಗತ್ಯವಿರುವ ಸೂಕ್ತ ಅನುದಾನ ತರುವುದಾಗಿಯೇ ಭರವಸೆ ನೀಡಿದ ಶಾಸಕರ ಮಾತನ್ನು ಸ್ವಾಗತಿಸುತ್ತೇವೆ. ಶಾಸಕರು ತಮ್ಮ ಈ ಮಾತಿಗೆ ಬದ್ಧರಾಗಿ, ಆಸ್ಪತ್ರೆಗೆ ಮತ್ತು ಉಪಕರಣಕ್ಕೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಕೇಳಿ, ತರಬೇಕಿದೆ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಸದಸ್ಯ ಹಾಲಪ್ಪ, ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ನಂದನ ಸಾಗರ, ಜಯಶೀಲ ಗೌಡ ಬಾಶಿ, ನಾರಾಯಣ ಹೆಗಡೆ, ಚಿದಾನಂದ ಹರಿಜನ ಮತ್ತಿತರರು ಇದ್ದರು.