ಮೇಲ್ಮನೆ ಚುನಾವಣೆ ಸಮಸ್ಯೆಗಳಿಗೆಶೀಘ್ರದಲ್ಲೇ ಪರಿಹಾರ: ವಿಜಯೇಂದ್ರಟಾಪ್‌- ಸಂಧಾನ- ಈಗಾಗಲೇ 2 ಕ್ಷೇತ್ರದಲ್ಲಿ ಬಿಕ್ಕಟ್ಟು ಇತ್ಯರ್ಥ, ಉಳಿದೆಡೆ ಶೀಘ್ರ

KannadaprabhaNewsNetwork | Published : May 19, 2024 1:50 AM

ಸಾರಾಂಶ

ವಿಧಾನಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿವಿಧೆಡೆ ಇದ್ದ ಸಮಸ್ಯೆಗಳು ಶೀಘ್ರದಲ್ಲಿಯೇ ಪರಿಹಾರಗೊಳ್ಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಧಾನಪರಿಷತ್‌ನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿವಿಧೆಡೆ ಇದ್ದ ಸಮಸ್ಯೆಗಳು ಶೀಘ್ರದಲ್ಲಿಯೇ ಪರಿಹಾರಗೊಳ್ಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಪರಿಷತ್ತಿನ ಪದವೀಧರ- ಶಿಕ್ಷಕರ ಕ್ಷೇತ್ರದ 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ 4 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಎರಡು ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಲಾಗಿದೆ. ಆರು ಕ್ಷೇತ್ರಗಳಿಗೆ ಬಿಜೆಪಿಯಿಂದ ಉಸ್ತುವಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅಮರನಾಥ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಿರಿಯ ಮುಖಂಡ ಸುರೇಶ್ ಸಜ್ಜನ್ ಅವರು ಕಳೆದೆರಡು ವರ್ಷಗಳಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಮಾಡಿ ಆಕಾಂಕ್ಷಿಯಾಗಿದ್ದರು. ಹೀಗಾಗಿ ನಾಮಪತ್ರ ಸಲ್ಲಿಸಿದ್ದರು. ಸುರೇಶ್ ಸಜ್ಜನ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಚುನಾವಣಾ ಅಖಾಡದಿಂದ ಹಿಂದೆ ಸರಿದು ಬಿಜೆಪಿ ಬೆಂಬಲಿಸಲು ಮುಂದಾಗಿರುವುದು ಸಂತಸದ ವಿಚಾರ. ಇದರಿಂದ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲು ಅನುಕೂಲವಾಗಿದೆ ಎಂದರು.

ಇನ್ನು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಿಂಗರಾಜ್ ಅವರ ಹೆಸರನ್ನು ಘೋಷಿಸಲಾಗಿತ್ತು. ನಂತರ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡಲಾಯಿತು. ನಾಮಪತ್ರ ಸಲ್ಲಿಸಿದ್ದ ನಿಂಗರಾಜ್ ಅವರ ಮನವೊಲಿಕೆ ಮಾಡಲಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯುವುದಾಗಿ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಎರಡೂ ಕ್ಷೇತ್ರದಲ್ಲೂ ಕೂಡ ಸಮಸ್ಯೆಗಳು ಇತ್ಯರ್ಥವಾಗಿವೆ. ಬೇರೆ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಕುಸಿತ:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಾಗಿನಿಂದ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣಗಳು, ಲವ್‌ ಜಿಹಾದ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ವಿರೋಧಿಸಿ ಮಹಿಳಾ ಮೋರ್ಚಾ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಈಗಲಾದರೂ ಎಚ್ಚತ್ತುಕೊಂಡು ಕಾನೂನು- ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.

ಸಿಬಿಐಗೆ ಪ್ರಜ್ವಲ್ ಕೇಸು ನೀಡಿ:

ಇದೇ ವೇಳೆ ಹಾಸನದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ನೀಡಬೇಕು. ಪ್ರಕರಣದಲ್ಲಿ ಸರ್ಕಾರದ ಘಟಾನುಘಟಿಗಳ ಹೆಸರುಗಳು ಸಹ ಕೇಳಿಬರುತ್ತಿವೆ. ಎಸ್‌ಐಟಿಯಿಂದ ಪಾರದರ್ಶಕ ತನಿಖೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಟ್ಟು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

Share this article