ಕನ್ನಡಪ್ರಭ ವಾರ್ತೆ ನರಸಿಹಂರಾಜಪುರ
ಉತ್ತಮ ಸಮಾಜ ನಿರ್ಮಿಸಲು ಯುವಕರ ಪಾತ್ರ ಅತ್ಯಂತ ದೊಡ್ಡದಾಗಿದೆ ಎಂದು ಕಲಾವಿದ ಅಭಿನವ ಗಿರಿರಾಜ್ ತಿಳಿಸಿದರು.ಅವರು ಹೊನ್ನೇಕೊಡಿಗೆ ಶಾಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದಲ್ಲಿ ವಿಶೇಷ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಯುವ ಜನತೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಶಿಕ್ಷಣ ಪಡೆದ ನಂತರ ಯುವ ಜನರು ಸಮಾಜಕ್ಕೆ ಮೊದಲ ಹೆಜ್ಜೆ ಇಡುತ್ತಾರೆ. ಕುಟುಂಬ ನಿರ್ವಹಣೆ ಹಾಗೂ ಸ್ವಂತ ಉದ್ಯೋಗ ಜೊತೆಗೆ ಸಮಾಜಕ್ಕೂ ಏನನ್ನಾದರೂ ನೀಡಬೇಕು ಎಂಬ ತುಡಿತ ಯುವಜನರಲ್ಲಿ ಕಾಡುತ್ತಿರುತ್ತದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಿದರೆ ಅದು ಸೇವೆಯಾಗುತ್ತದೆ. ಯಾವುದೇ ಸಾಮಾಜಿಕ ಕೆಲಸ ಮಾಡಲು ಹೊರಟಾಗ ಸಮಾಜದ ವಿವಿಧ ಸ್ಥರಗಳಲ್ಲೂ ಟೀಕೆ, ಟಿಪ್ಪಣಿ ಎದುರಿಸಬೇಕಾಗುತ್ತದೆ. ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ವೈಯ್ಯಕ್ತಿಕ ಅಭಿವೃದ್ಧಿ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಯುವ ಜನರು, ಮಹಿಳೆಯರು ರಕ್ತದಾನ ಮಾಡಬೇಕು. ರಕ್ತದಾನದಿಂದ ಅಮೂಲ್ಯವಾದ ಜೀವ ಉಳಿಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಹೊನ್ನೇಕೊಡಿಗೆ ಗ್ರಾಪಂ ಪಿಡಿಒ ಜೋಸೆಫ್ ಕೆ.ಡಿ. ಗ್ರಾಮೀಣ ಅಭಿವೃದ್ದಿಯಲ್ಲಿ ಸಮುದಾಯದ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಮನುಷ್ಯನ ಅತಿಯಾದ ದುರಾಸೆಯಿಂದ ಇಂದು ಪ್ರಕೃತಿ, ಸಸ್ಯ ಸಂಕುಲ, ಅರಣ್ಯ ಕಳೆದುಕೊಳ್ಳುತ್ತಿದ್ದೇವೆ. ಪ್ಲಾಸ್ಟಿಕ್ ಬಳಸಬಾರದು. ಒಳ್ಳೆಯ ಗಾಳಿ, ನೀರು ಮನುಷ್ಯನಿಗೆ ಅತಿ ಅವಶ್ಯಕವಾಗಿದೆ ಎಂದ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಮುಖ್ಯ ಅತಿಥಿಯಾಗಿದ್ದ ಸೋಷಿಯಲ್ ವೆಲ್ ಪೇರ್ ಸೊಸೈಟಿ ನಿರ್ದೇಶಕ ಫಾ.ಜೋವಿಶ್ ಅವರು ಸೋಷಿಯಲ್ ವೆಲ್ ಪೇರ್ ಸೊಸೈಟಿಯು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಾಗೂ ಸೊಸೈಟಿಯಲ್ಲಿ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಮನುಷ್ಯನಿಗೆ ಆರೋಗ್ಯವೇ ಭಾಗ್ಯವಾಗಿದೆ ಎಂದು ಸೋಷಿಯಲ್ ವೆಲ್ ಪೇರ್ ಸೊಸೈಟಿ ಸಿಸ್ಟರ್ ಚಾರ್ಲ್ಸ್ ತಿಳಿಸಿದರು.ಅವರು ಶಿಬಿರದಲ್ಲಿ ಮಧ್ಯಾಹ್ನ ಸೋಪು ತಯಾರಿಕೆ, ಅಣಬೆ ಕೃಷಿ ಹಾಗೂ ಮನೆ ಮದ್ದು ಬಗ್ಗೆ ವಿಶೇಷ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜ್ವರ ಹಾಗೂ ಇತರ ಸಣ್ಣ ಕಾಯಿಲೆಗಳಿಗೆ ಮನೆಯಲ್ಲೇ ಮದ್ದು ತಯಾರಿಸಬಹುದು ಎಂದರು. ಸಭೆಯಲ್ಲಿ ಸೋಷಿಯಲ್ ವೆಲ್ ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಉಪಸ್ಥಿತರಿದ್ದರು.
ಸಭೆ ಅಧ್ಯಕ್ಷತೆಯನ್ನು ಹೊನ್ನೇಕೊಡಿಗೆ ಗ್ರಾಪಂ ಸಾಲೂರು ಧ.ಗ್ರಾ.ಯೋಜನೆ ಒಕ್ಕೂಟದ ಅಧ್ಯಕ್ಷ ರಮೇಶ್ ವಹಿಸಿದ್ದರು. ಅತಿಥಿಗಳಾಗಿ ಹೊನ್ನೇಕೊಡಿಗೆ ಕೃಷಿಕರಾದ ಎಚ್.ಸಿ.ರೇಖಾ ಉಪಸ್ಥಿತರಿದ್ದರು. ನಂತರ ಕಲಾವಿದರಾದ ಅಭಿನವ ಗಿರಿರಾಜ್ ಹಾಗೂ ವಿನಂತಗೌಡ ನೇತ್ರತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.