ಪ್ರಲ್ಹಾದರೆಡ್ಡಿ ಮಾದಿನಾಳ ಕನಕಗಿರಿ
ಹಲವು ದಶಕಗಳ ಹೋರಾಟದ ಫಲವಾಗಿ ತಾಲೂಕಾದರೂ ಇಲ್ಲಿನ ಜನತೆ ಕಾನೂನು ಸೇವೆಗಳಿಗಾಗಿ ಗಂಗಾವತಿಗೆ ನ್ಯಾಯಾಲಯಕ್ಕೆ ಹೋಗಾಬೇಕಾದ ಅನಿವಾರ್ಯತೆ ಇತ್ತು. ಕನಕಗಿರಿ ಪಟ್ಟಣದಲ್ಲಿಯೇ ನ್ಯಾಯಾಲಯ ಆರಂಭಿಸಬೇಕೆನ್ನುವ ಬೇಡಿಕೆ ಹಲವು ವರ್ಷಗಳಿಂದಲೂ ಇಲ್ಲಿಯ ಜನರಲ್ಲಿತ್ತು. ಕಲಾಪ ನಡೆಸುವ ನಿಟ್ಟಿನಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳಿಂದ ಹಲವು ಕಟ್ಟಡ ಪರಿಶೀಲನೆ ನಡೆಸಿ ನಾನಾ ಕಾರಣಗಳಿಂದ ಕೋರ್ಟ್ ಆರಂಭದ ಕಾರ್ಯ ಮುಂದೂಡಲಾಯಿತು.
ಕೊನೆಗೆ ಪಟ್ಟಣದ ಎಪಿಎಂಸಿ ಶ್ರಮಿಕ ಭವನ ಕಟ್ಟಡ ಕಲಾಪಕ್ಕೆ ನಡೆಸಲು ಉತ್ತಮವಾಗಿದೆ ಎಂದು ಪರಿಶೀಲಿಸಿ,ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯೇ ಅಂತಿಮಗೊಳಿಸಿದ್ದರು. ನ್ಯಾಯಾಧೀಶರು ವೀಕ್ಷಿಸಿ,ಪರಿಶೀಲಿಸಿದಂತೆ ಕೋರ್ಟ್ ಗೆ ಬೇಕಾದ ಸುವ್ಯವಸ್ಥೆ ಮಾಡಿಕೊಡುವಂತೆ ಸರ್ಕಾರಕ್ಕೆ ತಿಳಿಸಿದ್ದರು. ಸರ್ಕಾರದ ಆದೇಶಿಸಿದಂತೆ ಕೆಆರ್ ಐಡಿಎಲ್ ನ್ಯಾಯಾಲಯಕ್ಕೆ ಬೇಕಾದ ಎಲ್ಲ ಸಿದ್ದತೆಗಳನ್ನು ಮಾಡಿಕೊಟ್ಟಿದೆ.ಜು. ೧೭ರಂದು ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೊಪ್ಪಳ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಸಿ.ಎಂ ಪೂಣಚ್ಚ ವರ್ಚುವ್ಯಲ್ ಮೂಲಕ ಉದ್ಘಾಟಿಸಲಿದ್ದಾರೆ. ಶಾಸಕ ಶಿವರಾಜ ತಂಗಡಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ ಸಿ, ಕರ್ನಾಟಕ ಲ್ಯಾಂಡ್ ಗ್ಯಾಬಿಂಗ್ ಪ್ರೊಹಿಬಿಷನ್ ಸ್ಪೇಷಲ್ ಕೋರ್ಟ್ ಬೆಂಗಳೂರು ಮಾಜಿ ಅಧ್ಯಕ್ಷ ಎನ್.ಎಸ್ ಪಾಟೀಲ್, ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಎಪಿಎಂಸಿ ಕಾರ್ಯದರ್ಶಿ ಸಾವಿತ್ರಿ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕನಕಗಿರಿ ತಾಲೂಕು ಕೇಂದ್ರವಾಗಿ 8 ವರ್ಷದ ಬಳಿಕ ನ್ಯಾಯಾಲಯ ಸಂಕೀರ್ಣ ಉದ್ಘಾಟನೆಯಾಗುತ್ತಿದೆ. ತಾಲೂಕು ಸೇರಿ ನಾನಾ ಗ್ರಾಮಗಳ ಜನ ರಾಯಚೂರು, ಕೊಪ್ಪಳ ಬಳಿಕ ಗಂಗಾವತಿಗೆ ದಿನವಿಡಿ ಅಲೆದಾಡಬೇಕಿತ್ತು. ಇದೀಗ ಸ್ಥಳೀಯ ಮಟ್ಟದಲ್ಲಿಯೇ ಕೋರ್ಟ್ ಕಲಾಪಗಳು ನಡೆಯುವುದರಿಂದ ಕನಕಗಿರಿ ಹಾಗೂ ಸುತ್ತಮುತ್ತಲಿನ ಸುಮಾರು 64 ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ವಾರದ ಕೊನೆಯ ಎರಡು ದಿನ (ಶುಕ್ರವಾರ-ಶನಿವಾರ) ಕಲಾಪ ನಡೆಯಲಿದೆ. ಈ ಸಂಚಾರಿ ನ್ಯಾಯಾಲಯ ಪೀಠ ಸಿದ್ದತೆಗೆ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ (ಸಿಎಂಐಡಿಪಿ) ಯೋಜನೆಯಡಿ 35 ಲಕ್ಷ ವೆಚ್ಚದಲ್ಲಿ ವಿದ್ಯುತ್, ಪೇಂಟಿಂಗ್, ಸಿಲೀಂಗ್ ದುರಸ್ತಿ, ಸಿಸಿ ಕ್ಯಾಮೆರಾ ಅಳವಡಿಕೆ ಹಾಗೂ ನ್ಯಾಯಾಲಯಕ್ಕೆ ಬೇಕಾದ ಪೀಠೋಪಕರಣ ಒದಗಿಸಲಾಗಿದೆ.