ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಹೆಬ್ಬಕವಾಡಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರೇರಣಾ-ಪರಿವರ್ತನಾ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಮೊಬೈಲ್ ಇಂದು ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆಯಾಗುತ್ತಿದೆ. ಮಗುವಿನಿಂದ ಹಿಡಿದು ದೊಡ್ಡವರೂ ಕೂಡ ಮೊಬೈಲ್‌ನಲ್ಲಿ ಮುಳುಗಿಹೋಗಿದ್ದಾರೆ. ಅದನ್ನು ಬಿಟ್ಟು ಪ್ರಪಂಚವೇ ಇಲ್ಲವೆಂದು ತಿಳಿದುಕೊಂಡಿದ್ದಾರೆ. ಇದು ಅಪಾಯದ ಸಂಕೇತ ಎಂದು ಆತಂಕ ವ್ಯಕ್ತಪಡಿಸಿದರು.
ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಒಳ್ಳೆಯ ವಿಚಾರಗಳು ಮನಸ್ಸಿನೊಳಗೆ ಸೇರುವುದರಿಂದ ಒಳ್ಳೆಯ ಆಲೋಚನೆಗಳು ಮೂಡುತ್ತವೆ. ಮೊಬೈಲ್‌ನಿಂದ ಪ್ರಚೋದನೆಗೊಳಗಾಗುವುದು, ಕೆಟ್ಟ ಆಲೋಚನೆಗಳು, ಮಾನಸಿಕ ಒತ್ತಡ, ಮನಸ್ಸಿನ ಚಂಚಲತೆ ಸೃಷ್ಟಿಯಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುವುದೂ ಇದೆ. ಇದರಿಂದ ಮೊಬೈಲ್‌ನಿಂದ ದೂರವಿದ್ದು, ಮನೆಯಲ್ಲಿ ತಂದೆ-ತಾಯಿ, ಹಿರಿಯರು, ಒಳ್ಳೆಯವರೊಂದಿಗೆ ಸಂವಾದ, ಮಾತುಕತೆ, ವಿಚಾರ-ವಿನಿಮಯ ಮಾಡಿಕೊಳ್ಳುವುದರಿಂದ ಹೊಸ ವಿಚಾರಗಳು ಮನಸ್ಸಿನಲ್ಲಿ ದಾಖಲಾಗುತ್ತವೆ. ಕೌಟುಂಬಿಕ ಸಂಬಂಧಗಳು, ಬಾಂಧವ್ಯ ಬೆಳವಣಿಗೆ ಕಾಣುವುದಾಗಿ ತಿಳಿಸಿದರು.ಇದು ಸ್ಪರ್ಧಾತ್ಮಕ ಯುಗ. ಪೈಪೋಟಿ ತೀವ್ರವಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ಆಲಸ್ಯ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಲಾಗುವುದಿಲ್ಲ. ಆಯಾ ದಿನದ ಪಾಠಗಳನ್ನು ಅಂದಂದೇ ಓದಿ ಮನನ ಮಾಡಿಕೊಳ್ಳಬೇಕು. ಅರ್ಥವಾಗದ ವಿಷಯಗಳನ್ನು ಶಿಕ್ಷಕರನ್ನು ಕೇಳಿ ಅರ್ಥೈಸಿಕೊಳ್ಳಬೇಕು. ಕಷ್ಟದ ವಿಷಯಗಳಿಗೆ ಹೆಚ್ಚು ಆಸಕ್ತಿ ಕೊಟ್ಟು ಓದಬೇಕು. ಈಗಿನಿಂದಲೇ ಓದಿಕೊಂಡರೆ ಪರೀಕ್ಷೆ ಬರೆಯುವುದಕ್ಕೆ ಅನುಕೂಲವಾಗಲಿದೆ. ಪರೀಕ್ಷೆ ಬಂದಾಗ ಒತ್ತಡಕ್ಕೆ ಒಳಗಾಗುವ ಆತಂಕವೂ ಇರುವುದಿಲ್ಲ ಎಂದರು.
ಸರ್ಕಾರಿ ಶಾಲೆಗಳಲ್ಲೂ ಪ್ರತಿಭಾವಂತ ಮಕ್ಕಳಿದ್ದಾರೆ. ಪ್ರತಿಭೆಗಳು ಬೆಳವಣಿಗೆ ಕಾಣಬೇಕು. ಅವು ಮೊಳಕೆಯಲ್ಲೇ ಚಿವುಟಿ ಹೋಗಬಾರದು. ಮಕ್ಕಳನ್ನು ಉತ್ತಮರನ್ನಾಗಿ ಬೆಳೆಸುವುದು ಪೋಷಕರು ಮತ್ತು ಶಿಕ್ಷಕರ ಕರ್ತವ್ಯವಾಗಿದೆ. ಅವರನ್ನು ಒಳ್ಳೆಯ ಹಾದಿಯಲ್ಲಿ ಮುನ್ನಡೆಸುವ ಮೂಲಕ ಪ್ರಜ್ಞಾವಂತರು, ಸಂಸ್ಕಾರವಂತರನ್ನಾಗಿ ಮಾಡಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಜಿ.ಬಿ.ಬೋರೇಗೌಡ ಇದ್ದರು.