ಕಾರವಾರ: ಇಂಡಿಯನ್ ಕೋಸ್ಟ್ ಗಾರ್ಡ್‌ನ ರೋಚಕ ಕಾರ್ಯಾಚರಣೆ, ಮೀನುಗಾರರ ರಕ್ಷಣೆ ಇದಕ್ಕೆಲ್ಲಾ ಇಲ್ಲಿನ ಅರಬ್ಬಿ ಸಮುದ್ರ ಸಾಕ್ಷಿಯಾಯಿತು. ಮೈನವಿರೇಳಿಸುವ ಅಣಕು ಕಾರ್ಯಾಚರಣೆಯ ಶನಿವಾರ ಮೂಲಕ ಸಾರ್ವಜನಿಕರಿಗೆ ತೋರಿಸಲಾಯಿತು.
ಇತ್ತೀಚಗೆ ಸರಕು ಸಾಗಾಣಿಕಾ ಹಡಗಿನ ಮೇಲೆ ಗಲ್ಫ್ ಆಫ್ ಏಡನ್‌ನಲ್ಲಿ ಕಡಲ್ಗಳ್ಳರು ದಾಳಿ ಮಾಡಿದ್ದರು. ಭಾರತೀಯ ರಕ್ಷಣಾ ಪಡೆಗಳೇ ನೆರವು ನೀಡಿತ್ತು. ಇದರ ಹೊರತಾಗಿ ಹಲವು ದಾಳಿ ನಡೆದಿದ್ದು, ಸಾಕಷ್ಟು ಆತಂಕವನ್ನು ಉಂಟುಮಾಡಿದೆ. ಜಲಮಾರ್ಗದಲ್ಲಿ ಇಂತಹ ದಾಳಿಗಳು ನಡೆದಾಗ ಕೋಸ್ಟ್ ಗಾರ್ಡ್ ಹೇಗೆ ಕೆಲಸ ಮಾಡುತ್ತದೆ? ದಾಳಿಕೋರರನ್ನು ಹಿಮ್ಮೆಟ್ಟಿಸುತ್ತದೆ? ಎನ್ನುವುದನ್ನು ನೈಜ ಗುಂಡಿನ ಚಕಮಕಿ ಮೂಲಕ ತೋರಿಸಲಾಯಿತು.
ಇಲ್ಲಿನ ಬೈತಖೋಲ್ ವಾಣಿಜ್ಯ ಬಂದರಿನಿಂದ ಅಂದಾಜು ೧೦೦ಕ್ಕೂ ಅಧಿಕ ಸಾರ್ವಜನಿಕರು ಕೋಸ್ಟ್ ಗಾರ್ಡ್‌ನ ಹಡಗಿನಲ್ಲಿ ಆಳ ಸಮುದ್ರಕ್ಕೆ ತೆರಳಿ ರಕ್ಷಣಾ ಪಡೆಯ ಕಾರ್ಯವೈಖರಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.ಇಂಡಿಯನ್ ಕೋಸ್ಟ್ ಗಾರ್ಡ್‌ನಿಂದ ಅಣಕು ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ರಕ್ಷಣಾ ಕಾರ್ಯದ ಬಗ್ಗೆ ತೋರಿಸಿರುವುದು ಶ್ಲಾಘನೀಯವಾಗಿದೆ. ಇದು ಯುವ ಜನಾಂಗಕ್ಕೆ ದೇಶ ಸೇವೆಗೆ ಸೇರಿಕೊಳ್ಳಲು ಸ್ಫೂರ್ತಿದಾಯಕವಾಗಿದೆ. ಜತೆಗೆ ಅರಬ್ಬಿ ಸಮುದ್ರದಲ್ಲಿ ಅವರ ಬದುಕು ಹೇಗಿರುತ್ತದೆ ಎನ್ನುವುದು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮ ಸಂಘಟಿಸಬೇಕು ಎಂದು ಕಾರವಾರ ಸರ್ಕಾರಿ ಪದವಿ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಮಹೇಂದ್ರಕುಮಾರ ಹೇಳಿದರು.