1952ರಿಂದ ನಿರಂತರ ಮತದಾನ ಮಾಡಿ ಮಾದರಿಯಾದ ಶತಾಯುಷಿಗಳು

KannadaprabhaNewsNetwork |  
Published : May 07, 2024, 01:02 AM IST
ಗುರುಮಠಕಲ್‌ ತಾಲೂಕಿನ ಆಶಾಪೂರಿ ತಾಂಡಾದ ಗ್ರಾಮದ ಗೋಮಾಳಿ ಬಾಯಿ ಹನಮ್ಯ ನಾಯಕ (100) ಶತಾಯುಷಿ. | Kannada Prabha

ಸಾರಾಂಶ

ಆಶಾಪೂರಿ ತಾಂಡಾದ ಗೋಮಾಳಿ ಬಾಯಿ ಹನಮ್ಯ ನಾಯ್ಕ (100) ಎಂಬ ಶತಾಯುಷಿ ಒಂದೇ ಒಂದು ಬಾರಿಯೂ ಮತದಾನದಿಂದ ದೂರ ಉಳಿದಿಲ್ಲ. ಮೋಟನಹಳ್ಳಿ ಗ್ರಾಮದ ಮರೆಮ್ಮ ನಾಟೆಕಾರ್ ಎಂಬ 100 ವರ್ಷದ ವೃದ್ಧೆಯೂ ಸಹ ಒಮ್ಮೆಯೂ ಮತದಾನ ತಪ್ಪಿಸಿಲ್ಲ.

ಮೊಗಲಪ್ಪ ನಾಯಕಿನ್‌

ಕನ್ನಡಪ್ರಭ ವಾರ್ತೆ ಗುರುಮಠಕಲ್

ಅನೇಕರು ಮತದಾನದಿಂದ ದೂರ ಉಳಿಯುವ ಸನ್ನಿವೇಶದ ನಡುವೆಯೂ ಗುರುಮಠಕಲ್ ಮತಕ್ಷೇತ್ರದಲ್ಲಿರುವ ಇಬ್ಬರು ಶತಾಯುಷಿಗಳು ಮತದಾನಕ್ಕೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ತಾಲೂಕಿನ ಆಶಾಪೂರಿ ತಾಂಡಾದ ಗೋಮಾಳಿ ಬಾಯಿ ಹನಮ್ಯ ನಾಯ್ಕ (100) ಎಂಬ ಶತಾಯುಷಿ ಒಂದೇ ಒಂದು ಬಾರಿಯೂ ಮತದಾನದಿಂದ ದೂರ ಉಳಿದಿಲ್ಲ. ಮೋಟನಹಳ್ಳಿ ಗ್ರಾಮದ ಮರೆಮ್ಮ ನಾಟೆಕಾರ್ ಎಂಬ 100 ವರ್ಷದ ವೃದ್ಧೆಯೂ ಸಹ ಒಮ್ಮೆಯೂ ಮತದಾನ ತಪ್ಪಿಸಿಲ್ಲ. ತಮ್ಮ ಈ ಇಳಿವಯಸ್ಸಿನಲ್ಲಿಯೂ ಲವಲವಿಕೆಯಿಂದ ಇರುವ ಇವರಿಬ್ಬರು 1952ರಿಂದ ಆರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ನಿರಂತರವಾಗಿ ಮತದಾನ ಮಾಡುತ್ತಾ ಬಂದಿದ್ದಾರೆ.

ಭಾರತ ಚುನಾವಣೆ ಆಯೋಗವು 85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನರಿಗೆ ನಿಯಮ 12ಡಿ ಮುಖಾಂತರ ಅರ್ಜಿ ಸಲ್ಲಿಸಿದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಇವರಿಬ್ಬರು ಸದುಪಯೋಗಪಡಿಸಿಕೊಂಡಿದ್ದಾರೆ.

ಗೋಮಳಿ ಬಾಯಿಗೆ ಇಬ್ಬರು ಗಂಡು ಮಕ್ಕಳಿದ್ದು ಇಬ್ಬರು ಸೊಸೆಯಿಂದರು ಹಾಗೂ 11 ಜನ ಮೊಮ್ಮಕ್ಕಳು ಇದ್ದಾರೆ. ಮತದಾನ ದಿನವನ್ನುತಮ್ಮ ಕುಟುಂಬ ಅಲ್ಲದೆ ತಮ್ಮ ತಾಂಡಾದಲ್ಲಿ ಪ್ರಜಾಪ್ರಭುತ್ವ ದ ದೊಡ್ಡಹಬ್ಬ ಎಂದು ಆಚರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಗೋಮಾಳಿ ಬಾಯಿ "ಮೊದಲ ನನ್ನ ಮತದಾನ ಹಾಕಿದ್ದು ಈಗಲೂ ನೆನೆಪಿದೆ. ತಮ್ಮ ಆಶಾಪುರಿ ತಾಂಡಾದಿಂದ 6 ಕಿ. ಮೀ ದೂರದಲ್ಲಿರುವ ಎಲ್ಲೇರಿ ಗ್ರಾಮಕ್ಕೆ ನಡೆದುಕೊಂಡು ಬಂದು ಮತ ಚಲಾಯಿಸಿದ್ದೆ. ನಂತರ ವಾಹನಗಳಲ್ಲಿ ನಮ್ಮೂರಿನ ಹಿರಿಯರು ಕರೆದುಕೊಂಡು ಹೋಗಿ ವಗ್ರಾಣಿ (ಸೂಸಲ) ತಿನ್ನಿಸುತ್ತಿದ್ದರು. ಈಗಿನ ಹಾಗೆ ಹಣ ಕೊಡುತ್ತಿಲ್ಲ. ವಗ್ರಾಣಿ ಮತ್ತು ಚಹಾ ಕುಡಿದು ಓಟ್ ಹಾಕಿ ನಮ್ಮ ತಾಂಡಗಳಿಗೆ ಬರುತ್ತಿದ್ದೆವು ಎಂದು ಮೆಲುಕು ಹಾಕಿದರು.

"ಕಳೆದ 10 ವರ್ಷಗಳಿಂದ ನಮ್ಮ ತಾಂಡಾದಲ್ಲಿ ಮತಗಟ್ಟೆ ಅವಕಾಶ ಕಲ್ಪಿಸಿದ್ದಾರೆ. ಈಗ ಮನೆಗೆ ಅಧಿಕಾರಿ ಗಳು ಬಂದು ಓಟ್ ಹಾಕಿಸಿಕೊಂಡು ಹೋಗಿದ್ದಾರೆ. ಮತದಾನ ದಿನ ಹಬ್ಬದ ವಾತಾವರಣ ನಮ್ಮಲ್ಲಿ ಏರ್ಪಡುತ್ತದೆ. ಇಲ್ಲಿಯವರೆಗೆ ನಾನು ಯಾವುದೇ ಕಾರಣಕ್ಕೂ ನನ್ನ ಮತ ಮಿಸ್ ಮಾಡಿಕೊಂಡಿಲ್ಲ.. " ಎಂದು ತಮ್ಮ ಅನುಭವ ವನ್ನು "ಕನ್ನಡಪ್ರಭ "ದೊಂದಿಗೆ ಹಂಚಿಕೊಂಡರು.

ತಾಲೂಕಿನ ಮೋಟನಹಳ್ಳಿ ಗ್ರಾಮದ ಮರೆಮ್ಮ ಭೀಮಣ್ಣ ನಾಟೆಕಾರ್ (100) ಶತಾಯುಷಿ ಮಹಿಳೆಯು ಮೊದಲಿನ ಚುನಾವಣೆಯಿಂದ ಪಂಚಾಯಿತಿ ಚುನಾವಣೆ, ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗಳಿಗೆ ಮತ ಚಲಾಯಿಸಿದ ಅನುಭವ ಇದೆ.

ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದು, 5 ಜನ ಮೊಮ್ಮಕ್ಕಳು ಇದ್ದಾರೆ. ಶತಾಯುಷಿ ಬದುಕಿನ ಕೊನೆಯ ಕಾಲಘಟ್ಟದಲ್ಲಿ ತಮ್ಮ ಹಕ್ಕು ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು. ಶತಾಯುಷಿ ಮರೆಮ್ಮ ನಾಟೆಕಾರ್ ಅವರ ಪುತ್ರ ಬಾಲಪ್ಪ ನಾಟೆಕಾರ ಅವರು ಮಾತನಾಡಿ, ಭಾರತ ದೇಶದಲ್ಲಿ ಮತದಾನ ಪ್ರಾರಂಭಗೊಂಡಾಗಿನಿಂದಲು ನಮ್ಮ ತಾಯಿ ಮತದಾನದ ಹಕ್ಕನ್ನು ಚಲಾಯಿಸುತ್ತಿದ್ದಾರೆ.ಇಂತಹ ಶತಾಯುಷಿ ಮತ ದಾರರು ನಮ್ಮ ಗ್ರಾಮದ ಹೆಮ್ಮೆ. ಮತದಾರರು ತಾವೆಲ್ಲರೂ ಇವರನ್ನು ಪ್ರೇರಣೆಯಾಗಿಟ್ಟುಕೊಂಡು, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ