ಕನ್ನಡಪ್ರಭ ವಾರ್ತೆ ಹಲಗೂರು
ಲಯನ್ಸ್ ಸಂಸ್ಥೆ ಹಲವು ವರ್ಷಗಳಿಂದ ಸಾರ್ವಜನಿಕರ ಸೇವೆ ಮೂಲಕ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ಸುಬ್ರಹ್ಮಣ್ಯ ತಿಳಿಸಿದರು.ಲಯನ್ಸ್ ಕ್ಲಬ್ ನ ಆವರಣದಲ್ಲಿ ನ್ಯೂ ಡಯಾಕೇರ ಸೆಂಟರ್, ಪಾಲಿ ಕ್ಲಿನಿಕ್ ಹಾಗೂ ನವಾಯು ಕೇರ್ ಸೆಂಟರ್ ಸಹಯೋಗದೊಂದಿಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಸಿವು ನಿವಾರಣೆ ಕಾರ್ಯಕ್ರಮದ ಮೂಲಕ ಹಲಗೂರು ಸರ್ಕಾರಿ ಆಸ್ಪತ್ರೆ ಆವರಣದಲ್ಲಿ 50 ರಿಂದ 60 ಜನರಿಗೆ ನಿತ್ಯ ಊಟದ ವ್ಯವಸ್ಥೆ ಮಾಡುತ್ತಾ ಮಂಡ್ಯ ಜಿಲ್ಲೆಯಲ್ಲಿ ಮಾದರಿ ಸಂಸ್ಥೆಯನ್ನಾಗಿಸಿದ್ದಾರೆ ಎಂದರು.ಸಂಸ್ಥೆ ಪ್ರಾರಂಭವಾಗಿ 42 ವರ್ಷಗಳು ಪೂರೈಸಿ 50ಕ್ಕೂ ಹೆಚ್ಚು ಸದಸ್ಯತ್ವ ಹೊಂದಿದೆ. ಇನ್ನೂ ಎರಡು ಸಂಸ್ಥೆಗಳನ್ನು ಅಂತರವಳ್ಳಿ ಅಥವಾ ಹಾಡ್ಲಿ ಸರ್ಕಲ್ ಗ್ರಾಮಗಳಲ್ಲಿ ಆರಂಭಿಸಿ ಸದಸ್ಯತ್ವವನ್ನು ನೀಡಿ ಎಂದು ಸಲಹೆ ನೀಡಿದರು.
ವೈದಾಧಿಕಾರಿ ಎ.ಆರ್.ರೇಣುಕ ಪ್ರಸಾದ್ ಮಾತನಾಡಿ, ಸಕ್ಕರೆ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ದೇಶದಲ್ಲಿ ಮಧುಮೇಹಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸರಿಯಾದ ಸಮಯಕ್ಕೆ ವೈದಾಧಿಕಾರಿಗಳ ಸಲಹೆ- ಸೂಚನೆ ಪಡೆದು ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದರು.ಮಧುಮೇಹದ ಬಗ್ಗೆ ನಿರ್ಲಕ್ಷಿಸಿದರೆ ನಮ್ಮ ದೇಹದ ಅಂಗಾಂಗಗಳು ನಿಷ್ಕ್ರಿಯಗೊಳ್ಳುತ್ತವೆ. ಪ್ರತಿಯೊಬ್ಬರಿಗೂ 30 ವರ್ಷಗಳಾದ ನಂತರ ಎಲ್ಲಾ ವಯಸ್ಸಿನವರು ಹಾಗೂ ಮಕ್ಕಳಿಗೂ ಸಹ ಮಧುಮೇಹ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದರು.
ಮಧುಮೇಹ ಶಿಕ್ಷಣ ತಜ್ಞೆ ನವ್ಯ ಪ್ರಸಾದ್ ಮಾತನಾಡಿ, ಮಧುಮೇಹ ಬಂದವರು ತುಪ್ಪ ತಿನ್ನಬಾರದು ಎನ್ನುತ್ತಾರೆ. ತುಪ್ಪ ತಿನ್ನುವುದರಿಂದ ನಮ್ಮಲ್ಲಿ ಇನ್ಸುಲಿನ್ ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. ಸರಿಯಾದ ಸಮಯಕ್ಕೆ ಮಿತಿಯಾದ ಆಹಾರ ಸೇವನೆ, ವಾಕಿಂಗ್ ಮುಗಿದ ನಂತರ ಮನೆಯಲ್ಲಿ ಒಂದು ಗಂಟೆ ವ್ಯಾಯಾಮ ಅಥವಾ ಯೋಗಭ್ಯಾಸ ಮಾಡುವುದರಿಂದ ಮತ್ತು ಮೂರು ತಿಂಗಳಿಗೊಮ್ಮೆ ವೈದ್ಯಾಧಿಕಾರಿಗಳ ಬಳಿ ತಪಾಸಣೆ ನಡೆಸಿಕೊಳ್ಳುವುದರಿಂದ ಮಧುಮೇಹ ರೋಗವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ ಎಂದರು.ಮೈಸೂರಿನ ಚರ್ಮರೋಗ ತಜ್ಞ ಹಾಗೂ ಲಯನ್ಸ್ ಕ್ಲಬ್ ಜಿಲ್ಲಾಧ್ಯಕ್ಷ ವೈ.ಎಂ.ಶಿವಕುಮಾರ್ ಮಾತನಾಡಿದರು. ಗಣ್ಯರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಎನ್.ಕೆ. ಕುಮಾರ್, ಕಾರ್ಯದರ್ಶಿ ಡಿ.ಎಲ್.ಮಾದೇಗೌಡ, ಖಜಾಂಜಿ ಕೆ,ಶಿವರಾಜು ಸೇರಿ ಸದಸ್ಯರು ಹಾಜರಿದ್ದರು.