ಬಳ್ಳಾರಿ: ಆಧುನಿಕ ತಂತ್ರಜ್ಞಾನ ಅಪರಾಧ ನಿಯಂತ್ರಣದಲ್ಲಿ ಪರಿಣಾಮಕಾರಿ ಸಾಧನವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸುಧಾರಿತ ವ್ಯವಸ್ಥೆಗಳ ಮೂಲಕ ಸಾರ್ವಜನಿಕರ ಸುರಕ್ಷತೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಹಾಗೂ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ತಿಳಿಸಿದರು.
ಸಿಸಿ ಟಿವಿ ಕ್ಯಾಮೆರಾಗಳು, ಡ್ರೋನ್ ಮೇಲ್ವಿಚಾರಣೆ, ಫೇಸ್ ರೆಕಗ್ನಿಷನ್ ವ್ಯವಸ್ಥೆ, ಸೈಬರ್ ನಿಗಾ ತಂತ್ರಜ್ಞಾನ ಇವುಗಳ ಬಳಕೆಯಿಂದ ಅಪರಾಧಿಗಳನ್ನು ಗುರುತಿಸುವುದು ಹಾಗೂ ತಕ್ಷಣ ಕ್ರಮ ಕೈಗೊಳ್ಳುವುದು ಸುಲಭವಾಗಿದೆ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಪೊಲೀಸ್ ಇಲಾಖೆ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ನಿಗಾವ್ಯವಸ್ಥೆಯನ್ನು ಬಲಪಡಿಸಿದೆ.
ಇದಲ್ಲದೆ, ಮೊಬೈಲ್ ಆ್ಯಪ್‌ಗಳು ಮತ್ತು ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಸಾರ್ವಜನಿಕರು ಕೂಡ ತಮ್ಮ ಸುತ್ತಮುತ್ತ ನಡೆಯುವ ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣವೇ ಪೊಲೀಸ್ ಇಲಾಖೆಗೆ ತಿಳಿಸುವ ಅವಕಾಶ ಪಡೆಯುತ್ತಿದ್ದಾರೆ. ಇದರಿಂದ ಅಪರಾಧಗಳನ್ನು ಮುಂಚಿತವಾಗಿಯೇ ತಡೆಯಲು ಸಹಕಾರಿಯಾಗುತ್ತಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ, ಸೈಬರ್ ಕ್ರೈಂ ಸೆಲ್‌ಗಳು ಮತ್ತು ಡಿಜಿಟಲ್ ಫೋರೆನ್ಸಿಕ್ ತಂತ್ರಜ್ಞಾನಗಳು ಪ್ರಮುಖ ಪಾತ್ರವಹಿಸುತ್ತಿವೆ. ಬ್ಯಾಂಕಿಂಗ್ ವಂಚನೆ, ಆನ್‌ಲೈನ್ ಮೋಸ ಪ್ರಕರಣಗಳನ್ನು ಪತ್ತೆಹಚ್ಚಲು ಸಹ ಈ ಆಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚು ಉಪಯುಕ್ತವಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ಸಿಬ್ಬಂದಿ ಸೂಕ್ತ ತರಬೇತಿ ಪಡೆಯಬೇಕು. ಪ್ರಕರಣಗಳ ತನಿಖೆಯಲ್ಲಿ ಈ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟೂ ಬಲಪಡಿಸಬೇಕು ಎಂದು ನಿರ್ದೇಶನ ನೀಡಿದರು.ಇಲಾಖೆಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಕಿರಿಯ ಅಧಿಕಾರಿಗಳಿಗೆ ಹಿರಿಯರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರ ವೃತ್ತಿ ಕೌಶಲ್ಯವನ್ನು ಹೆಚ್ಚಿಸಬೇಕು. ವಿವಿಧ ಪ್ರಕರಣಗಳ ನಿರ್ವಹಣೆ, ಸಾರ್ವಜನಿಕರೊಂದಿಗೆ ನಡವಳಿಕೆ, ಒತ್ತಡದ ಸಂದರ್ಭಗಳಲ್ಲಿ ತಕ್ಷಣದ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇತ್ಯಾದಿಗಳನ್ನು ಅನುಭವದ ಮೂಲಕವೇ ಅರಿತುಕೊಳ್ಳಬಹುದು.
ಸಭೆಯ ನಂತರ ಡಿಜಿಪಿ ಡಾ. ಎಂ.ಎ. ಸಲೀಂ ಅವರು ಡಿ.ಎ.ಆರ್. ಪೊಲೀಸ್ ವಸತಿ ಗೃಹಗಳ ಸಂಕೀರ್ಣಕ್ಕೆ ಭೇಟಿ ನೀಡಿ, ಅಲ್ಲಿ ವಾಸಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಟುಂಬದವರ ಕುಂದುಕೊರತೆಗಳನ್ನು ಆಲಿಸಿದರು. ಇದಾದ ಬಳಿಕ ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಹರ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್, ಎಎಸ್ಪಿ ಎಸ್. ನವೀನ್ ಕುಮಾರ್ ಸೇರಿದಂತೆ ಜಿಲ್ಲೆಯ ಡಿವೈಎಸ್ಪಿಗಳು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.