ಓಬಿಸಿಗೆ 27% ಶಿಕ್ಷಣ ಮೀಸಲು ನೀಡಿದ ಮೋದಿ: ಈಶ್ವರಪ್ಪ

KannadaprabhaNewsNetwork |  
Published : Mar 01, 2024, 02:16 AM IST
ಶಿಕಾರಿಪುರದಲ್ಲಿ ಗುರುವಾರ ನಡೆದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಧಾನಿ ಮೋದಿರವರ ಜಾತಿಯನ್ನು ಪ್ರಶ್ನಿಸುವ ಕಾಂಗ್ರೆಸ್‌ ಹಿಂದುಳಿದವರಿಗೆ ಏನು ಕೊಡುಗೆ ನೀಡಿದೆ ಹಿಂದುಳಿದವರನ್ನು ಮೊದಲು ಪ್ರಧಾನಿಯಾಗಿಸಿದ ಹೆಗ್ಗಳಿಕೆ ಬಿಜೆಪಿಯದ್ದು ಶಿಕಾರಿಪುರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರದಾನಿ ಮೋದಿ ಹಿಂದುಳಿದ ಜಾತಿಯಲ್ಲ ಎಂದು ಟೀಕಿಸುವ ರಾಹುಲ್ ಗಾಂಧಿಗೆ ತನ್ನ ಜಾತಿಯ ಮೂಲ ಗೊತ್ತಿದೆಯಾ? ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ಗುರುವಾರ ಪಟ್ಟಣದ ಶ್ರೀ ಮಾರಿಕಾಂಬಾ ದೇವಸ್ಥಾನದ ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಘಣ್ಣ ಸಂಸದರಾದ ನಂತರ ಅತಿಹೆಚ್ಚು ಯೋಜನೆಯನ್ನು ಶಿವಮೊಗ್ಗ ಜಿಲ್ಲೆಗೆ ತಂದಿದ್ದು, ಇದನ್ನು ಕಾಂಗ್ರೆಸ್ ಪಕ್ಷದ ನಾಯಕರೂ ಒಪ್ಪಿಕೊಳ್ಳುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಸಮುದಾಯದವರು ಅನುದಾನದಿಂದ ವಂಚಿತರಾಗಿಲ್ಲ. ಹಿಂದುಳಿದವರಿಗೆ ಶೇ.27 ಮೀಸಲಾತಿಯನ್ನು ಶಿಕ್ಷಣದಲ್ಲಿ ನೀಡಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರಾಗಿದ್ದಾರೆ ಎಂದರು.

ಬಿಜೆಪಿ ಅಧಿಕಾರಾವಧಿಯಲ್ಲಿ ಎಲ್ಲ ಹಿಂದುಳಿದ, ದಲಿತ ಮಠಗಳಿಗೆ ಅನುದಾನ ನೀಡಿದ್ದು, ಕಾಗಿನೆಲೆ, ಮಾದಾರ ಪೀಠ, ಮಡಿವಾಳ ಸಹಿತ ಎಲ್ಲ ಸಮುದಾಯಕ್ಕೆ ನೀಡಲಾಗಿದೆ. ನಾನು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಎಸೆಯುತ್ತೇನೆ. ಹಿಂದುಳಿದ ವರ್ಗಗಳಿಗೆ ನೀವು ಎಷ್ಟು ಅನುದಾನ ನೀಡಿದ್ದೀರಿ. ನಾವು ಎಷ್ಟು ಅನುದಾನ ನೀಡಿದ್ದೇವೆ ಎಂಬುದಕ್ಕೆ ಬಹಿರಂಗ ಚರ್ಚೆಯಾಗಲಿ. ಒಂದು ಗುಲಗಂಜಿಯಷ್ಟು ಬಿಜೆಪಿಗಿಂತ ಹೆಚ್ಚು ಸಾಧನೆಯನ್ನು ಕಾಂಗ್ರೆಸ್ ಮಾಡಿದಲ್ಲಿ ಪಟ್ಟಿ ಬಿಡುಗಡೆ ಮಾಡಿ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಸವಾಲು ಹಾಕಿದರು.

ಮೋದಿಯವರ ಕ್ಯಾಬಿನೇಟ್ ನಲ್ಲಿ 29 ಹಿಂದುಳಿದ ವರ್ಗದ ನಾಯಕರನ್ನ ಸಚಿವರನ್ನಾಗಿ ಮಾಡಲಾಗಿದೆ. ನಮಗೆ ಜಾತಿ ಗೊತ್ತಿಲ್ಲ ಕಾಂಗ್ರೆಸ್‌ನವರು ಜಾತಿ ವಿಷ ಬೀಜ ಬಿತ್ತುತ್ತಿ ದ್ದಾರೆ. ಶ್ರೀ ರಾಮ ಮಂದಿರ ಉದ್ಘಾಟನೆಗೆ ದಲಿತ, ಹಿಂದುಳಿದವರನ್ನು ಆಹ್ವಾನಿಸಿಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದು, ಎಲ್ಲ ದಲಿತ, ಹಿಂದುಳಿದ ಶ್ರೀಗಳು ಹೋಗಿ ಬಂದಿದ್ದಾರೆ ಶ್ರೀರಾಮ, ಶ್ರೀ ಕೃಷ್ಣ ಹಿಂದುಳಿದವರು ಎಂಬುದು ಅವರಿಗೆ ತಿಳಿದಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ರಾಘವೇಂದ್ರ,ಮಾಜಿ ಸಚಿವ ಲಕ್ಷ್ಮಿನಾರಾಯಣ, ಹರತಾಳು ಹಾಲಪ್ಪ,ಮುಖಂಡ ಗುರುಮೂರ್ತಿ, ಎಚ್‌.ಟಿ ಬಳಿಗಾರ್, ಶಾರದಾ ಅಪ್ಪಾಜಿಗೌಡ ಜಿಲ್ಲಾಧ್ಯಕ್ಷ ಮೇಘರಾಜ್, ಡಾ.ಧನಂಜಯ ಸರ್ಜಿ, ತಲ್ಲೂರು ರಾಜು, ರಾಮಾನಾಯ್ಕ, ಗಾಯತ್ರಿದೇವಿ ಮತ್ತಿತರರು ಉಪಸ್ಥಿತರಿದ್ದರು.

ಮೋದಿ ಜಾತಿಯನ್ನು ಪ್ರಶ್ನಿಸುವ ರಾಹುಲ್‌ಗೆ ತನ್ನ ಜಾತಿ ಗೊತ್ತಾ?

ಪ್ರಧಾನಿ ಮೋದಿರವರ ಜಾತಿಯನ್ನು ಪ್ರಶ್ನಿಸುವ ಕಾಂಗ್ರೆಸ್‌ ಹಿಂದುಳಿದವರಿಗೆ ಏನು ಕೊಡುಗೆ ನೀಡಿದೆ ಹಿಂದುಳಿದವರನ್ನು ಮೊದಲು ಪ್ರಧಾನಿಯಾಗಿಸಿದ ಹೆಗ್ಗಳಿಕೆ ಬಿಜೆಪಿ ಯದ್ದು, ರಾಹುಲ್‌ ಗಾಂಧಿ ಪ್ರಧಾನಿ ಮೋದಿ ಹಿಂದುಳಿದವರಲ್ಲ ಎಂದು ಟೀಕಿಸಿದ್ದು, ನಾನು ಪ್ರಶ್ನಿಸುತ್ತೇನೆ ನಿಮ್ಮ ತಂದೆ ರಾಜೀವ್‌ ಗಾಂಧಿ ಹಿಂದೂ, ತಾಯಿ ಸೋನಿಯಾ ಕ್ರಿಶ್ಚಿಯನ್‌, ಅಜ್ಜಿ ಇಂದಿರಾ ಹಿಂದೂ, ಅಜ್ಜ ಮುತ್ತಜ್ಜ ಯಾವ ಜಾತಿ ಎಂಬುದು ನಿನಗೆ ಗೊತ್ತಿದೆಯಾ? ಎಂದ ಅವರು ನಿಮ್ಮ ಜಾತಿ ನಿಮಗೆ ಗೊತ್ತಿಲ್ಲದೆ ಮೋದಿ ಜಾತಿಯನ್ನು ಪ್ರಶ್ನಿಸುತ್ತೀರಾ? ನಿಮಗೆ ನಾಚಿಕೆ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಘಣ್ಣ ನೊಬೆಲ್‌ಗೆ ಅರ್ಹರು: ಪ್ರಶಂಸೆ ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಕೇವಲ 1 ಲೋಕಸಭಾ ಸ್ಥಾನ ಕಾಂಗ್ರೆಸ್‌ ಗೆದ್ದಿದ್ದು, ಇದೀಗ ಮರಿಹುಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ. ಯಡಿಯೂರಪ್ಪ ಹಾಗೂ ದೇವೇಗೌಡರು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ. ಹಳ್ಳಿ ಹಳ್ಳಿಯನ್ನು ಅಭಿವೃದ್ಧಿ ಪಡಿಸಿದ ಯಡಿಯೂರಪ್ಪ ಹಾಗೂ ರಾಘವೇಂದ್ರ ನೋಬಲ್ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಮೋದಿ ಪುನಃ ಪ್ರಧಾನಿಯಾಗಲು ರಾಘಣ್ಣ ಸಂಸದರಾಗಬೇಕು ಎಂದರು.

ಕಾಶಿ, ಮಥುರಾ ಶೀಘ್ರ ಮಸೀದಿ ಮುಕ್ತಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಇನ್ನೂ ಎರಡು ಪುಣ್ಯ ಕ್ಷೇತ್ರವನ್ನು ಮಸೀದಿ ಮುಕ್ತ ಮಾಡಲಿದ್ದೇವೆ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಕ್ರೋಶ ಭರಿತರಾಗಿ ಹೇಳಿದರು.ದೇಶದಲ್ಲಿ ಹಿಂದುಗಳ ಅವಿರತ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ಆದೇಶದಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದೆ. ಅದೇ ರೀತಿ ಮಥುರಾದಲ್ಲಿ ಕೃಷ್ಣ ಮಂದಿರ, ಕಾಶಿಯಲ್ಲಿ ವಿಶ್ವನಾಥ ಮಂದಿರ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸುಪ್ರೀಂ ಕೋರ್ಟಿನ ತೀರ್ಪು ದೇಶದ ಹಿಂದುಗಳ ಪರವಾಗಿದ್ದು, ಈ ಎರಡೂ ಪುಣ್ಯ ಕ್ಷೇತ್ರಗಳಲ್ಲಿ ಮಂದಿರ ನಿರ್ಮಾಣವಾಗುವುದು ಶತಃಸಿದ್ಧ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌