ಬಿಜೆಪಿ ಕಾರ್ಯಾಲಯದಲ್ಲಿ ಪ್ರಧಾನಿ ಆಡಳಿತ ಕುರಿತ ವಿಕಸಿತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರ
ಸ್ವಾರ್ಥಕ್ಕೆ ಆಸೆ ಪಡದೇ, ನಿಸ್ವಾರ್ಥದಿಂದ ಭಾರತೀಯರ ಉಜ್ವಲ ಭವಿಷ್ಯಕ್ಕೆ ಹಗಲಿರುಳು ಎನ್ನದೆ ನಿರಂತರ ದುಡಿಯುತ್ತಿರುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇಡೀ ವಿಶ್ವವೇ ಕಂಡ ಅಪರೂಪದ ಪ್ರಜಾಪ್ರಭುತ್ವ ಆಳ್ವಿಕೆಯಾಗಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ 11 ವರ್ಷಗಳ ಅಭಿವೃದ್ಧಿ ಕುರಿತ ವಿಕಸಿತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸರ್ಕಾರ ಬಡವರ, ದೀನದಲಿತರ ಏಳಿಗೆಗೆ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ದಶಕವನ್ನು ಪೂರೈಸಿ ಸಾಧನೆ ಮಾಡಿದೆ. ಸದಾಕಾಲ ರಾಷ್ಟ್ರದ ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನ ಮಂತ್ರಿ ಭಾರತಾಂಬೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ವಿಚಾರ ಎಲ್ಲೆಡೆ ಪಸರಿಸಬೇಕಿದೆ ಎಂದರು.
ರಾಷ್ಟ್ರದಲ್ಲೇ ಬಿಜೆಪಿ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ದೊಡ್ಡ ರಾಜಕೀಯ ಪಕ್ಷ. ಹೀಗಾಗಿ ಕೇಂದ್ರದಿಂದ ಕೈಗೊಂಡಿರುವ ಅಭಿವೃದ್ಧಿ ಯೋಜನೆ, ಪ್ರವಾಸಿಗರ ಸಾವಿಗೆ ಆಪರೇಷನ್ ಸಿಂದೂರ ಮೂಲಕ ತಕ್ಕ ಉತ್ತರದ ಪ್ರತೀಕಾರದಲ್ಲಿ ಯಶಸ್ಸು ಸೇರಿದಂತೆ ಜನಪರ ಆಡಳಿತದ ಮಾಹಿತಿ ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರತಿ ಪಕ್ಷಗಳ ಬೇಡವಾದ ವಿಷಯಗಳಿಗೆ ಕಾರ್ಯಕರ್ತರು ಕಿವಿಗೊಡದೇ ಸಕಾರಾತ್ಮಕವಾಗಿ ಚಿಂತಿಸುವ ಆಲೋಚನೆ ಹೊಂದಬೇಕು. ಕೇಂದ್ರ ಸರ್ಕಾರದ ಸಾಧನೆ ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಮಯವಾಗಿದೆ. ಸಾಮಾನ್ಯವಾಗಿ ರಾಜಕೀಯ ಆಳ್ವಿಕೆ ಕೇಳಿದ್ದೇವೆ. ಆದರೆ ಮೋದಿ ಸರ್ಕಾರದ ವಿಭಿನ್ನ, ವಿಶೇಷ ಆಳ್ವಿಕೆ ಬೇರೆ ಯಾವ ಪಕ್ಷದಲ್ಲೂ ಕೇಳಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಬೆಳವಾಡಿ ರವೀಂದ್ರ, ಪುಣ್ಯಪಾಲ್, ಡಾ.ನರೇಂದ್ರ, ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಂ ಭರಣ್ಯ, ಕಾರ್ಯಗಾರದ ಸಹ ಸಂಚಾಲಕ ಶರತ್, ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಮಧುಕುಮಾರರಾಜ್ ಅರಸ್, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್ ಇತರರು ಹಾಜರಿದ್ದರು.