ಕನ್ನಡಪ್ರಭ ವಾರ್ತೆ ಹಾವೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹಿಳೆಯರಿಗೆ ಮನೆಗೆ ನಳದ ನೀರು, ಉಜ್ಬಲ ಗ್ಯಾಸ್‌ನಂತಹ ಶಾಶ್ವತ ಗ್ಯಾರಂಟಿಗಳನ್ನು ಕೊಟ್ಟಿದ್ದಾರೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಶಾಶ್ವತ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಲಕ್ಷಪತಿ ದೀದಿ ಎನ್ನುವ ಯೋಜನೆ ಮೂಲಕ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಿದ್ದಾರೆ. ಮೋದಿಯವರದು ಶಾಶ್ವತ ಗ್ಯಾರಂಟಿ, ಕಾಂಗ್ರೆಸ್ ನವರದು ತಾತ್ಕಾಲಿಕ ಗ್ಯಾರಂಟಿ ಎಂದು ಹೇಳಿದರು.ರಾಜ್ಯ ಸರ್ಕಾರ ಗೃಹಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆ ಯಜಮಾನಿಗೆ ಎರಡು ಸಾವಿರ ನೀಡುವುದಾಗಿ ಹೇಳಿದ್ದಾರೆ. ಆದರೆ, ಎಲ್ಲ ಮಹಿಳೆಯರಿಗೆ ಯೋಜನೆಯ ಹಣ ಸಿಗುತ್ತಿಲ್ಲ. ಅರ್ಜಿ ಹಾಕಿದ ಮಹಿಳೆಯರು ಬ್ಯಾಂಕ್‌ಗೆ ಅಲೆದು ಅವರ ಚಪ್ಪಲಿ ಸವೆಯುತ್ತಿವೆ ಎಂದರು.
ಅಕ್ಕಿಆಲೂರು ಅಳಿಯನಿಗೆ ಮಳೆರಾಯನ ಸ್ವಾಗತದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿರುವ ನಡುವೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಆಗಮನದಿಂದ ಚುನಾವಣಾ ಕಾವಿಗೆ ತಂಪೆರೆಯಿತು. ಅಕ್ಕಿಆಲೂರಿನಲ್ಲಿ ಬಿಜೆಪಿ ಮಹಿಳಾ ಸಮಾವೇಶದ ಸಂದರ್ಭದಲ್ಲಿ ಮಳೆರಾಯನ ಆಗಮನವಾಯಿತು. ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ತಮ್ಮ ಪತ್ನಿಯ ತವರೂರಾದ ಅಕ್ಕಿಆಲೂರಿಗೆ ಆಗಮಿಸುತ್ತಿದ್ದಂತೆ ಮಳೆರಾಯನ ಆಗಮನವಾಯಿತು. ಅಳಿಯನ ಜೊತೆಗೆ ಮಳೆ ಬಂದು ಊರಿಗೆ ತಂಪು ತಂದಿರುವುದು ಶುಭ ಸಂಕೇತ ಎಂದು ಗ್ರಾಮದ ಜನರು ಸಂತಸ ಪಟ್ಟರು.
ಇಂದು ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ ನಾಮಪತ್ರ ಸಲ್ಲಿಕೆಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಏ. 19ರಂದು ಹಾವೇರಿ ನಗರದಲ್ಲಿ ಬೃಹತ್ ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಸಲಿದ್ದಾರೆ.ಏ. 19ರಂದು ಮಧ್ಯಾಹ್ನ 11 ಗಂಟೆಗೆ ಬಿಜೆಪಿ ಪ್ರಮುಖ ನಾಯಕರು, ಕಾರ್ಯಕರ್ತರೊಂದಿಗೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ರೋಡ್ ಶೋ ಆರಂಭಗೊಳ್ಳಲಿದ್ದು, ಎಂ.ಜಿ. ರೋಡ್ ಮೂಲಕ ಗಾಂಧಿ ಸರ್ಕಲ್, ಜೆ.ಪಿ. ಸರ್ಕಲ್, ಹೊಸಮನಿ ಸಿದ್ದಪ್ಪ ವೃತ್ತ ತಲುಪಿ ನಂತರ ಪಿ.ಬಿ. ರೋಡ್ ಮಾರ್ಗವಾಗಿ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜ ಹತ್ತಿರ ಖಾಲಿ ಜಾಗದಲ್ಲಿ ಸಮಾವೇಶಗೊಳ್ಳಲಿದೆ. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಬಿಜೆಪಿ ಮುಖಂಡರು ಮಾತನಾಡಲಿದ್ದಾರೆ. ತದನಂತರ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತ ಭವನಕ್ಕೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.ಈ ಬೃಹತ್ ರೋಡ್ ಶೋದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವರಾದ ಬಿ. ಶ್ರೀರಾಮಲು, ಬಿ.ಸಿ. ಪಾಟೀಲ, ಬೈರತಿ ಬಸವರಾಜ, ಮುರಗೇಶ ನಿರಾಣಿ, ಸಿ.ಸಿ. ಪಾಟೀಲ, ಕಳಕಪ್ಪ ಬಂಡಿ, ಸುನೀಲಕುಮಾರ, ಶಾಸಕರು ಮತ್ತು ಮಾಜಿ ಶಾಸಕರು, ಚಲನಚಿತ್ರ ನಟಿ ತಾರಾ ಸೇರಿದಂತಯೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಮತ್ತು ಜಿಲ್ಲಾ, ಮಂಡಲ ಪದಾಧಿಕಾರಿಗಳು, ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರಯ ಸೇರಿದಂತೆ ಹಾವೇರಿ-ಗದಗ ಜಿಲ್ಲೆಯ ಸುಮಾರು 60 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ.