ಮೋದಿ, ದೇವೇಗೌಡ ಸುಳ್ಳುಗಾರರು: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Mar 29, 2024, 12:48 AM ISTUpdated : Mar 29, 2024, 03:19 PM IST
 ಕಾಂಗ್ರೆಸ್ ಕಾರ್ಯಕರ್ತರ ಸಭೆ| Kannada Prabha

ಸಾರಾಂಶ

ಈಗ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಗಳಸ್ಯ ಕಂಠಸ್ಯ. ಮೋದಿ ಸುಳ್ಳುಗಾರ, ದೇವೇಗೌಡರು ಇನ್ನೊಬ್ಬ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಈಗ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಗಳಸ್ಯ ಕಂಠಸ್ಯ. ಮೋದಿ ಸುಳ್ಳುಗಾರ, ದೇವೇಗೌಡರು ಇನ್ನೊಬ್ಬ ಸುಳ್ಳುಗಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ದೇವೇಗೌಡರವರು ನನಗೂ, ಮೋದಿಗೂ ಅವಿನಾಭಾವ ಸಂಬಂಧ ಇದೆ. ಎನ್‌ಡಿಎ ಅಧಿಕಾರಕ್ಕೆ ಬಂದರೆ ಮೇಕೆದಾಟು ಅಣೆಕಟ್ಟು ಕಟ್ಟುತ್ತೇವೆ, ಕುಡಿಯುವ ನೀರು ಕೊಡುತ್ತೇವೆ ಅಂತ ಹೇಳುತ್ತಿದ್ದಾರೆ. 

ಮಿಸ್ಟರ್ ದೇವೇಗೌಡರೇ, ಮೋದಿ ಅವರೊಂದಿಗೆ ಅವಿನಾಭಾವ ಸಂಬಂಧ ಇದೆಯಲ್ಲ. ಈಗಲೇ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸಿ ಬೇಡ ಅಂದವರು ಯಾರು. ಎನ್‌ಡಿಎ ಬರುವರೆಗೆ ಏಕೆ ಕಾಯಬೇಕು. ಈಗಲೇ ಏಕೆ ಮಾಡಲ್ಲ ಎಂದು ಪ್ರಶ್ನಿಸಿದರು.

ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿದ್ದರು. ಅವರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಸೊಸೆ ಅನಿತಾ ಶಾಸಕರಾಗಿದ್ದರು. ಪುತ್ರ ರೇವಣ್ಣ ಸಚಿವರಾಗಿದ್ದರು, ಮೊಮ್ಮಗ ಪ್ರಜ್ವಲ್ ಸಂಸದರಾಗಿದ್ದರು. 

ಆಗಲೇ ಮೇಕೆದಾಟು ಯೋಜನೆ ಏಕೆ ಮಾಡಿಸಲಿಲ್ಲ. ಕಾವೇರಿ ಜಲಾನಯನ ಪ್ರದೇಶಕ್ಕೆ ದೇವೇಗೌಡರ ಕುಟುಂಬದ ಕೊಡುಗೆ ಶೂನ್ಯ ಎಂದು ಸಿದ್ದರಾಮಯ್ಯ ಟೀಕಿಸಿದರು.

ಕುಮಾರಸ್ವಾಮಿಯವರು ರಾಮನಗರ ತವರು ಜಿಲ್ಲೆ, ರಾಜಕೀಯವಾಗಿ ಜೀವದಾನ ಕೊಟ್ಟ ಜಿಲ್ಲೆ ಎನ್ನುತ್ತಿದ್ದರು. ಈಗ ಮಂಡ್ಯಕ್ಕೆ ಹೋಗುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಾಗಲೆ ಪುತ್ರನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ರಾಮನಗರ ಕ್ಷೇತ್ರದಲ್ಲಿಯೂ ಸೋತರು. ಕುಮಾರಸ್ವಾಮಿ ಮಂಡ್ಯದಲ್ಲಿ ನೂರಕ್ಕೆ ನೂರರಷ್ಟು ಸೋಲುವುದು ಗ್ಯಾರಂಟಿ ಎಂದರು.

ಈ ಕ್ಷೇತ್ರದಲ್ಲಿ ಬಿಜೆಪಿಯವರಿಗೆ ಅಭ್ಯರ್ಥಿ ಸಿಗಲಿಲ್ಲ. ಹೀಗಾಗಿ. ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಅಂತ ಡಾ.ಸಿ.ಎನ್. ಮಂಜುನಾಥ್ ಅವರನ್ನು ಕರೆ ತಂದು ನಿಲ್ಲಿಸಿದ್ದಾರೆ. 

ಅವರು ಎಂದಾದರು ಜನರ ಸೇವೆ ಮಾಡಿದ್ದಾರಾ?. ಜನರ ಮಧ್ಯೆ ಇರುವ ಕ್ರಿಯಾಶೀಲ ರಾಜಕಾರಣಿ ಡಿ.ಕೆ.ಸುರೇಶ್ ಬೇಕೆ ಹೊರತು ವೈಟ್ ಕಾಲರ್ ರಾಜಕಾರಣಿ ಡಾ.ಸಿ.ಎನ್. ಮಂಜುನಾಥ್ ಬೇಡ ಎಂಬುದನ್ನು ಕ್ಷೇತ್ರದ ಮತದಾರರು ನಿರ್ಧರಿಸಿ ಆಗಿದೆ. ಹೀಗಾಗಿ, ಬೆಂಗಳೂರು ಗ್ರಾಮಾಂತರದಲ್ಲಿ ಸುರೇಶ್‌ ಅವರ ಗೆಲುವು ಗ್ಯಾರಂಟಿ ಎಂದರು.

ಅಧಿಕಾರ ಕೊಟ್ಟ ನಿಮ್ಮನ್ನು ನಂಬದೇ ಎಚ್ಡಿಕೆ ಪಕ್ಕದ ಕ್ಷೇತ್ರಕ್ಕೆ ಹೋಗ್ತಿದ್ದಾರೆ: ಡಿಕೆಶಿನೀವು ಯಾರಿಗೆ ಅಧಿಕಾರ ಕೊಟ್ಟಿದ್ದೀರೊ ಅವರು ನಿಮ್ಮನ್ನು ನಂಬದೇ ಪಕ್ಕದ ಕ್ಷೇತ್ರಕ್ಕೆ ಹೋಗುತ್ತಿದ್ದಾರೆ. ನಿಮ್ಮ ಪರ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ. 

ಅವರಿಗೆ ಟಾಟಾ ಬೈ ಬೈ ಹೇಳಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ದಳದ ಅಭ್ಯರ್ಥಿಯನ್ನು ಬಿಜೆಪಿ ಚಿಹ್ನೆಯಲ್ಲಿ ನಿಲ್ಲಿಸಿದ್ದಾರೆ. 

ದಳ ಈಗ ಎಲ್ಲಿದೆ ಕುಮಾರಣ್ಣ. ಇದೇ ಜಿಲ್ಲೆಯಿಂದ 2 ಬಾರಿ ಮುಖ್ಯಮಂತ್ರಿಯಾಗಿ ಈಗ ಈ ಜಿಲ್ಲೆ ಬಿಟ್ಟು ಮಂಡ್ಯಕ್ಕೆ ಹೋಗುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಮೇಲೆ ಆ ಪಕ್ಷದ ನಾಯಕರಿಗೇ ನಂಬಿಕೆ ಇಲ್ಲ. 

ಈ ಜಿಲ್ಲೆಯ ಜನ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದರು. ಕಾಂಗ್ರೆಸ್ ಪಕ್ಷ ದೇವೇಗೌಡರನ್ನು ಪ್ರಧಾನಮಂತ್ರಿಯನ್ನಾಗಿ ಮಾಡಿತು. ನೀವೆಲ್ಲರೂ ಸೇರಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದಿರಿ. 

ನಂತರ ನಾವು ಅವರಿಗೆ ಬೆಂಬಲ ನೀಡಿ ಒಂದು ಬಾರಿ ಮುಖ್ಯಮಂತ್ರಿ ಮಾಡಿದೆವು. ಆದರೂ ಅವರ ಕುಟುಂಬದ ಸದಸ್ಯರನ್ನು ಬಿಜೆಪಿ ಪಕ್ಷದಿಂದ ಕಣಕ್ಕಿಳಿಸುತ್ತಿದ್ದಾರೆ. 

ಇದರಿಂದಾಗಿ ನಮಗೆ ಯಾವುದೇ ಬೇಸರವಿಲ್ಲ. ಈ ಹೋರಾಟ ನಮಗೆ ಹೊಸತಲ್ಲ. ಅಂದೂ ಹೋರಾಟ ಮಾಡಿದ್ದೆವು, ಇಂದೂ ಹೋರಾಡುತ್ತಿದ್ದೇವೆ ಎಂದರು.

ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಆಗ ದೇವೇಗೌಡರು ಬೆಂಬಲ ನೀಡಲಿಲ್ಲ. ಈಗ ತಮ್ಮ ಕುಟುಂಬದವರ ಸೋಲಿನ ಭೀತಿಯಿಂದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳುತ್ತಿದ್ದಾರೆ ಎಂದರು.

ನನ್ನನ್ನು ಸೋಲಿಸಲು ನಿರ್ದೇಶಕ, ನಿರ್ಮಾಪಕ, ಚಿತ್ರಕತೆ ಬರೆಯುವವರು, ನಟ, ಬಂಡವಾಳ ಹೂಡಿಕೆ ಮಾಡುವವರು ಎಲ್ಲಾ ಒಂದಾಗಿದ್ದಾರಂತೆ. ಸಿನಿಮಾದಲ್ಲಿ ರೀಲ್ ಬಿಟ್ಟಂತೆ ಇಲ್ಲಿ ಬಿಟ್ಟರೆ ಜನ ಒಪ್ಪುವುದಿಲ್ಲ. 

ನಾಯಕರಿಗೆ ನಿಜ ಜೀವನಕ್ಕೂ, ಸಿನಿಮಾಗೂ ವ್ಯತ್ಯಾಸ ಗೊತ್ತಿಲ್ಲ. ನಿಜ ಜೀವನದಲ್ಲಿ ಸೋಲಿಸಬೇಕೆ ಹೊರತು, ಸಿನಿಮಾದಲ್ಲಿ ಅಲ್ಲ. ನೀವು ಬಿಟ್ಟಿರುವ ಎಲ್ಲಾ ರೀಲುಗಳು ಡಬ್ಬ ಸೇರಿಕೊಂಡಿವೆ.- ಡಿ.ಕೆ. ಸುರೇಶ್‌, ಬೆಂ.ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ