ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದೇಶ ಕಂಡ ಅತ್ಯಂತ ಮಹಾನ್ ಸುಳ್ಳುಗಾರ ಪ್ರಧಾನಿ ಮೋದಿ. ಅವರ ಹೇಳುವ ಸುಳ್ಳುಗಳು ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.ಶಿವಮೊಗ್ಗದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶದಲ್ಲಿ ಬಿಜೆಪಿ ಪ್ರಧಾನಿಗಳು ಸೇರಿ ಅನೇಕರು ಪ್ರಧಾನ ಮಂತ್ರಿಗಳಾಗಿದ್ದಾರೆ. ಆದರೆ, ಇವರಷ್ಟು ಸುಳ್ಳನ್ನು ಯಾರೂ ಹೇಳಿಲ್ಲ. ಮೋದಿ ಅವರ ಸುಳ್ಳೇ ಕಾಂಗ್ರೆಸ್ ಗೆಲುವಿಗೆ ಹತ್ತಿರವಾಗುತ್ತಿದೆ. ಆಯಾ ರಾಜ್ಯಕ್ಕೆ ತಕ್ಕಂತೆ ಪೋಷಾಕು ಧರಿಸಿಕೊಂಡು ವೇಷಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾ ಈ ದೇಶದ ಜನರನ್ನೇ ದಿಕ್ಕು ತಪ್ಪಿಸಿದ್ದಾರೆ. ಸುಳ್ಳೇ ಅವರ ಸರಕು ಎಂದರು.
ಅಭಿವೃದ್ಧಿ ವಿಷಯವನ್ನೇ ಮಾತನಾಡದೇ ಪಾಕಿಸ್ತಾನ, ತಾಲಿಬಾನ್, ಮುಸಲ್ಮಾನ, ರಾಮಮಂದಿರ, ಮುಂತಾದ ವಿಷಯಗಳನ್ನೇ ವಿಜೃಂಭಿಸುತ್ತಾ ಮಾತನಾಡುವ ಭರದಲ್ಲಿ ಮಹಿಳೆ ಮಾಂಗಲ್ಯಕ್ಕೂ ಅವಮಾನ ಮಾಡುತ್ತಾರೆ ಎಂದರೆ ಪ್ರಧಾನಿಯ ಯೋಗ್ಯತೆ ಗೊತ್ತಾಗುತ್ತದೆ. ಭಾರತದಲ್ಲಿ ತಮ್ಮ ತಾಳಿ ಹೇಗೆ ಉಳಿಸಿಕೊಳ್ಳಬೇಕು ಎಂದು ನಮ್ಮ ಸಂಸ್ಕೃತಿ ನಮಗೆ ಹೇಳಿಕೊಟ್ಟಿದೆ. ಮಹಿಳೆಯರಿಗೆ ಆ ಶಕ್ತಿ ಕೂಡ ಇದೆ. ಆದರೆ, ದೇಶದ ಪ್ರಧಾನಿಯಾಗಿ ಮೋದಿ ಈ ರೀತಿ ಮಾತನಾಡುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ಕಿಡಿಕಾರಿದರು.ಮೋದಿ ಅವರ 10 ವರ್ಷದ ಆಡಳಿತದ ಅವಧಿಯಲ್ಲಿಯೇ ಹಿಂದೂ ಹೆಣ್ಣುಮಕ್ಕಳ ಮೇಲೆ ಹೆಚ್ಚಾಗಿ ಅತ್ಯಾಚಾರ ನಡೆದಿದೆ. ವರ್ಷಕ್ಕೆ ಸುಮಾರು 13 ಸಾವಿರ ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ. ಇದು ಅವರಿಗೆ ಗೊತ್ತಿಲ್ಲವೇ? ಮಣಿಪುರದಂತಹ ಘಟನೆ ಬಗ್ಗೆ ಏಕೆ ತುಟಿಕ್ ಪಿಟಿಕ್ ಎನ್ನಲಿಲ್ಲ? ಬಡವರು ಉದ್ಧಾರವಾಗಿದ್ದಾರೆ ಎಂದು ಹೇಳುವ ಅವರು, ಹಾಗಾದರೆ ಈಗ ಏಕೆ ನಾವು ಬಡವರ ಉದ್ಧಾರ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಈ ದೇಶಕ್ಕೆ ಸರ್ವಾಧಿಕಾರ ಕಟ್ಟಿಟ್ಟ ಬುತ್ತಿ. ಅವರು ಹಿಟ್ಲರ್ ಆಗುವುದರಲ್ಲಿ ಯಾವ ಅನುಮಾನಗಳು ಇಲ್ಲ. ಸರ್ವಾಧಿಕಾರ ಎನ್ನುವುದು ಪ್ರತ್ಯೇಕವಾದರೆ ಸಹಿಸಿಕೊಳ್ಳಬಹುದು. ಆದರೆ, ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರವೇ ವಿಜೃಂಭಿಸಿದರೆ ಈ ದೇಶದ ಗತಿ ಏನು? ಎಂದು ಪ್ರಶ್ನಿಸಿದ ಅವರು, ಇಡೀ ರಾಷ್ಟ್ರದಲ್ಲಿ ಮೋದಿ ಹೆಸರನ್ನೇ ಹೇಳಿಕೊಂಡು ಓಟು ಕೇಳುತ್ತಾರಲ್ಲ. ಇದಕ್ಕಿಂತ ದಯನೀಯ ಸ್ಥಿತಿ ಬಿಜೆಪಿಗೆ ಬೇಕೆ ಎಂದು ಹರಿಹಾಯ್ದರು.ಕಳೆದ 10 ವರ್ಷಗಳಲ್ಲಿ ಡಾಲರ್ ಬೆಲೆ ಏರಿತು. ಬಂಗಾರದ ಬೆಲೆ ಗಗನಕ್ಕೆ ಮುಟ್ಟಿತು. ದಿನ ನಿತ್ಯದ ವಸ್ತುಗಳ ಬೆಲೆಗಳು ಏರಿಕೆ ಆಗಿದೆ. ದೇಶದ ಆರ್ಥಿಕ ನೀತಿಗಳೇ ಬದಲಾದವು. ರಾಜ್ಯದಲ್ಲಿ ನಡೆಯುತ್ತಿರುವುದು ಲೋಕಸಭಾ ಚುನಾವಣೆ. ಇದು ಸತ್ಯ ಮತ್ತು ಅಸತ್ಯದ ಚುನಾವಣೆ. ಬಡವರು ಮತ್ತು ಶ್ರೀಮಂತರ ಮಧ್ಯೆ ಇರುವ ಚುನಾವಣೆ, ಅದಾನಿಯಂತಹ ಉದ್ಯಮಿ 11 ಲಕ್ಷ ಕೋಟಿ ರು. ಆದಾಯ ಗಳಿಸುತ್ತಾರೆ. ಎಂದರೆ ಈ ಸಂಪತ್ತು ಯಾರ ಕೈಯಲ್ಲಿದೆ ಎಂದರು.
ಶಿವಮೊಗ್ಗದಲ್ಲಿ ಗೀತಾ ಅವರ ಪರ ಮತದಾರರ ಒಲವು ಹೆಚ್ಚಾಗುತ್ತಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುತ್ತದೆ. ಈ ಬಾರಿ ನರೇಂದ್ರ ಮೋದಿ 200 ಸ್ಥಾನ ದಾಟುವುದಿಲ್ಲ. ಹಾಸನದ ಪೆನ್ ಡ್ರೈವ್ ವಿಚಾರಕ್ಕೆ ಸಂಬಂದಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಇಂತಹ ಘಟನೆಗಳು ನಡೆಯಬಾರದಿತ್ತು. ಈ ಬಗ್ಗೆ ಸರ್ಕಾರ ಎಸ್‍ಐಟಿಗೆ ವಹಿಸಿರುವುದು ಸ್ವಾಗತ. ನೊಂದ ಮಹಿಳೆಯರ ವಿಡಿಯೋ, ಫೋಟೋಗಳು ವೈರಲ್ ಆಗಿದ್ದು ಸರಿಯಲ್ಲ. ಈ ಬೆಳವಣಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಸುಮ್ಮನಿರುವುದು ಕೂಡ ದುರದೃಷ್ಟಕರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅನಿಲ್ ಕುಮಾರ್ ತಡಕಲ್, ಚಂದ್ರಭೂಪಾಲ್, ರವಿಕುಮಾರ್, ಎಸ್.ಕೆ. ಮರಿಯಪ್ಪ, ಜಿ.ಡಿ. ಮಂಜುನಾಥ್, ಎನ್.ಕೆ. ಶ್ಯಾಮಸುಂದರ್, ಜಿ. ಪದ್ಮನಾಭ್, ಶಿ.ಜು. ಪಾಶ ಮತ್ತಿತರರು ಇದ್ದರು.