ಹಾವೇರಿ: ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಲೋಕಸಭಾ ಚುನಾವಣೆ ಬಳಿಕವೂ ದೃಢಪಟ್ಟಿದೆ. ಮಹಾರಾಷ್ಟ್ರ, ಹರಿಯಾಣ, ಬಿಹಾರ ಎಲ್ಲಾ ಕಡೆ ಮೋದಿಯವರ ಜನಪ್ರಿಯತೆ ದೃಢಪಟ್ಟಿದೆ. ಅದೇ ರೀತಿ ಕಾಂಗ್ರೆಸ್ಸಿನವರ ಜಾತಿ ಲೆಕ್ಕಾಚಾರ ಸುಳ್ಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಕುರಿತು ಮಾಡಿತ್ತಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಗಳ್ಳತನ- ಯಾರಿಂದ ಆಗಿದೆ? ಪುರಾವೆ ಏನಿದೆ? ಮತ ಕಳೆದುಕೊಂಡವರಿಂದಲೂ ಆರೋಪ ಇಲ್ಲ. ಕದ್ದವರು ಯಾರು ಅಂತ ಇಲ್ಲ. ರಾಹುಲ್ ಗಾಂಧಿಯವರೇ ದೇಶದ ಎಲ್ಲಾ ರಾಜ್ಯಗಳಲ್ಲಿ ಮತ ಶುದ್ದೀಕರಣ ಆಗಬೇಕು ಅಂತ ಪತ್ರ ಬರೆದಿದ್ದಾರೆ. ಎಸ್ಐಆರ್ ಮಾಡಲು ಹೊರಟರೆ ಅದನ್ನು ಬೇಡ ಎನ್ನುತ್ತಾರೆ. ಕಾಂಗ್ರೆಸ್ ನವರು ಸುಳ್ಳನ್ನು ಪದೇ ಪದೇ ಹೇಳಿ ಸತ್ಯ ಮಾಡಲು ಹೋಗಿದ್ದನ್ನು ಜನ ನೋಡಿದಾರೆ, ಅವರ ಅರಾಜಕತೆ ನೋಡಿದ್ದಾರೆ. ನಾಯಕರಿಗಿಂತ ಜನ ಬುದ್ದಿವಂತರಿದ್ದಾರೆ ಎಂದು ಬಿಹಾರ್ ಜನ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಬಿಜೆಪಿ ಬಹುಮತ:ಬಿಹಾರ ಚುನಾವಣೆ ಫಲಿತಾಂಶ ರಾಜ್ಯ ಬಿಜೆಪಿಗೆ ಯಾವ ರೀತಿಯ ಪಾಠವಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ರಾಜ್ಯದ ದುಷ್ಟ ಕೆಟ್ಟ ಕಾಂಗ್ರೆಸ್ ಸರ್ಕಾರದ ವಿರುದ್ದ ನಾವೆಲ್ಲ ಒಗ್ಗಟ್ಟಾಗಿ ಜನಪರವಾದ ಹೋರಾಟಗಳನ್ನು ಮಾಡಿದರೆ ಖಂಡಿತವಾಗಿ ಮುಂದಿನ ಚುನಾವಣೆಯಲ್ಲಿ ಖಂಡಿತ ಬಿಜೆಪಿ ಬಹುಮತ ಬರಲಿದೆ ಎಂದು ಹೇಳಿದರು.ಚುನಾವಣೆ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ಆಗಿರುವ ಬಗ್ಗೆ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಂಬ್ ಬ್ಲಾಸ್ಟ್ ಗೂ ಚುನಾವಣೆಗೂ ಸಂಬಂಧ ಇಲ್ಲ. ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಜನರು ಬುದ್ದಿವಂತರಿದ್ದಾರೆ ಎಂದು ಹೇಳಿದರು.
ಸರಿಯಾದ ಸಮಯದಲ್ಲಿ ನಿಭಾಯಿಸಿದ್ದರೆ ಅವಘಡ ತಪ್ಪಿಸಬಹುದಿತ್ತು. ಈ ಬಗ್ಗೆ ತನಿಖೆ ಆಗಲಿ, ಮುಗ್ದ ರೈತರಿಗೆ ಆದ ಕಬ್ಬಿನ ನಷ್ಟ ಸರ್ಕಾವರೇ ತುಂಬಿಕೊಡಲಿ. ಇದು ಬೇಜವಾಬ್ದಾರಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ವೃಕ್ಷಮಾತೆಗೆ ಸಂತಾಪ:ವೃಕ್ಷಮಾತೆ, ಶತಾಯುಷಿ ಸಾಲು ಮರದ ತಿಮ್ಮಕ್ಕ ಅವರ ನಿಧನದ ಶುದ್ಧಿ ಕೇಳಿ ಅತ್ಯಂತ ಆಘಾತವಾಗಿದೆ. ಸಾವಿರಾರು ಗಿಡಗಳನ್ನು ನೆಟ್ಟು ಮಕ್ಕಳಂತೆ ಸಲುಹಿ ತನ್ನ ಇಡೀ ಜೀವನವನ್ನೇ ಪರಿಸರದ ಉಳುವಿಗಾಗಿ ಮುಡುಪಾಗಿಟ್ಟು ಅವರು ಮಾಡಿರುವ ಪರಿಸರ ಸೇವೆ ಸದಾಕಾಲ ಅವರನ್ನು ಜೀವಂತವಾಗಿಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.