ಕನ್ನಡಪ್ರಭ ವಾರ್ತೆ ಮಂಗಳೂರುಸಹಕಾರಿ ಕ್ಷೇತ್ರದ ಉನ್ನತಿ ಹಾಗೂ ಅದರ ಕೀರ್ತಿ ರಾಷ್ಟ್ರ ಮಟ್ಟದಲ್ಲಿ ಪಸರಿಸಲು ದಿ.ಮೊಳಹಳ್ಳಿ ಶಿವರಾಯರ ಪ್ರೇರಣೆ ಕಾರಣ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿ ಆಗಿರುವ ಸಹಕಾರ ರತ್ನ ಪುರಸ್ಕೃತ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಹಾಗೂ ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಲಿಮಿಟೆಡ್ ಆಶ್ರಯದಲ್ಲಿ ಭಾನುವಾರ ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸಹಕಾರಿ ಪಿತಾಮಹ ದಿ.ಮೊಳಹಳ್ಳಿ ಶಿವರಾವ್‌ರವರ 144ನೇ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಿ.ಮೊಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.1914ರಲ್ಲಿ ಪುತ್ತೂರಿನಲ್ಲಿ ಆರಂಭವಾದ ಸಹಕಾರ ಬ್ಯಾಂಕ್ 1925ರಲ್ಲಿ ಜಿಲ್ಲಾ ಕೇಂದ್ರ ಸ್ಥಾನ ಮಂಗಳೂರಿಗೆ ಸ್ಥಳಾಂತರಗೊಂಡಿತು. ಮೊಳಹಳ್ಳಿ ಶಿವರಾಯರು ಪುತ್ತೂರಿನಲ್ಲಿ ಭೂ ಬ್ಯಾಂಕ್ ಸೇರಿದಂತೆ ಅನೇಕ ಸಹಕಾರಿ ಸಂಘಗಳನ್ನು ಸ್ಥಾಪಿಸಿದರು. ಮೊಳಹಳ್ಳಿ ಊರಾದರೂ ಶಿವರಾಯರು ಹುಟ್ಟಿದ್ದು ಪುತ್ತೂರಿನಲ್ಲಿ. ವಕೀಲ ವೃತ್ತಿ ನಡೆಸದೆ ಸಹಕಾರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಮುಂದುವರಿದರು. ಅಂದು ಎತ್ತಿನ ಗಾಡಿಯಲ್ಲಿ ಮನೆ ಮನೆಗೆ ತೆರಳಿ ಸಹಕಾರಿ ತತ್ವವನ್ನು ಪ್ರಚುರಪಡಿಸಿದರು. ಈ ಮೂಲಕ ಸಹಕಾರಿ ತತ್ವಕ್ಕೆ ಅಡಿಪಾಯ ಹಾಕಿ ಬೆಳೆಸಿದ ಕಾರಣ ಪ್ರಸಕ್ತ ಅವಿಭಜಿತ ಜಿಲ್ಲೆಯ ಸಹಕಾರ ರಂಗ ರಾಜ್ಯ ಮಾತ್ರವಲ್ಲ ದೇಶಕ್ಕೆ ಮಾದರಿಯಾಗಿದೆ ಎಂದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಮಾತನಾಡಿ, ಸಹಕಾರಿ ರಂಗದಲ್ಲಿ ದಿ.ಶಿವರಾಯರ ಹಾದಿಯಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮುನ್ನಡೆಯುತ್ತಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು ಸಮಾಜಕ್ಕೆ ಮಾದರಿಯಾಗಿದ್ದು, ಸಹಕಾರ ರಂಗದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಈ ಜಿಲ್ಲೆ ದೇಶಕ್ಕೆ ಇನ್ನಷ್ಟು ಮಾದರಿಯಾಗಲಿ ಎಂದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಮಾತನಾಡಿ, ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಅಡಿಪಾಯ ಹಾಕಿದ ಮೊಳಹಳ್ಳಿ ಶಿವರಾಯರು, ಅದನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಹಾದಿಯಲ್ಲೇ ಡಾ.ಎಂ.ಎನ್.ಆರ್. ಸಾಗುತ್ತಿರುವುದು ಶ್ಲಾಘನೀಯ ಎಂದರು.
ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಟಿ. ಜಿ. ರಾಜರಾಮ್ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಶಶಿಕುಮಾರ್ ರೈ ಬಿ., ಎಸ್.ಬಿ. ಜಯರಾಮ ರೈ, ರಾಜು ಪೂಜಾರಿ, ಎಂ.ಮಹೇಶ್ ಹೆಗ್ಡೆ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಹರಿಶ್ಚಂದ್ರ, ಕೆ. ಜೈರಾಜ್ ಬಿ.ರೈ, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಜನತಾ ಬಜಾರ್ ಅಧ್ಯಕ್ಷ ಪುರುಷೋತ್ತಮ ಭಟ್, ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಹರೀಶ್ ಆಚಾರ್, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಯೂನಿಯನ್ ಕಾರ್ಯದರ್ಶಿ ಎಸ್. ವಿ. ಹಿರೇಮಠ, ನಿರ್ದೇಶಕಿ ಕೆ.ಸಾವಿತ್ರಿ ರೈ ಇದ್ದರು.