ಕನ್ನಡಪ್ರಭ ವಾರ್ತೆ ಕೋಲಾರಮಳೆಗಾಲ ಆರಂಭವಾಗಿದ್ದು ಕುಡಿಯುವ ನೀರಿನೊಂದಿಗೆ ಕೊಳಚೆ ನೀರು ಬೆರೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು. ಮುಂಗಾರು ಪೂರ್ವಸಿದ್ಧತೆಗೆ ಮತ್ತು ಕೈಗೊಂಡ ಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಳೆಗಾಲದಲ್ಲಿ ಮನೆಗಳು ಬೀಳುವುದು ಜೀವ ಹಾನಿಯಾಗುತ್ತಿರುವುದು ಕಂಡು ಬಂದಾಗ ಆಯಾ ತಹಸೀಲ್ದಾರ್‌ಗೆ ಮಾಹಿತಿ ನೀಡಬೇಕು. ಸಾಂಕ್ರಾಮಿಕ ರೋಗಗಳು ಹರಡಲು ಅವಕಾಶ ನೀಡದಂತೆ ಚರಂಡಿಗಳ ಸ್ವಚ್ಛತೆಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕೆಂದರು. ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ ಕಸ ವಿಲೇವಾರಿ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ಪ್ರತಿಯೊಬ್ಬ ಅಧಿಕಾರಿಗಳು ಪ್ರತಿನಿತ್ಯ ಬೆಳಗ್ಗೆ ನಗರ, ತಾಲೂಕು ಹಾಗೂ ಗ್ರಾಮಗಳಲ್ಲಿ ಸಂಚರಿಸಿ ಕಸ ವಿಲೇವಾರಿ ಬಗ್ಗೆ ಮಾಹಿತಿ ಕಡ್ಡಾಯವಾಗಿ ನೀಡಬೇಕು ಎಂದರು. ಜಿಲ್ಲೆಯ ಎಲ್ಲ ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ ಕಂಟ್ರೋಲ್ ರೂಂಗಳನ್ನು ಚಾಲನೆಗೊಳಿಸಬೇಕು. ಈ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಅತಿವೃಷ್ಟಿಯಿಂದ ಸಂಭವಿಸುವ ಸಾರ್ವಜನಿಕ ಆಸ್ತಿ ಹಾನಿ, ಮಾನವ, ಜಾನುವಾರು ಜೀವಹಾನಿ, ಬೆಳೆ ಹಾನಿ, ಮನೆಗಳ ಹಾನಿ ಬಗ್ಗೆ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು. ತಾಲೂಕುವಾರು ಕ್ರೋಢೀಕರಿಸಿ ನಿಗದಿತ ನಮೂನೆಯಲ್ಲಿ ಈ ಕಚೇರಿಗೆ ತಪ್ಪದೇ ವರದಿ ಸಲ್ಲಿಸಬಹುದೆಂದು ತಹಸೀಲ್ದಾರರಿಗೆ ಸೂಚಿಸಿದರು. ಚರಂಡಿಗಳ ಸ್ವಚ್ಛತೆಗೆ ಕ್ರಮ
ಯಾವುದೇ ವಿದ್ಯುತ್ ಕಸಿತ, ತುರ್ತುಸ್ಥಿತಿಗೆ ಹಾಜರಾಗಲು ಮತ್ತು ವಿದ್ಯುತ್ ಸರಬರಾಜನ್ನು ತ್ವರಿತವಾಗಿ ಪುನಃ ಸ್ಥಾಪಿಸಲು ರಚಿಸುವುದು ಮತ್ತು ವಿದ್ಯುತ್ ತಂತಿ ಹಾದು ಹೋಗುವ ಮಾರ್ಗಗಳಲ್ಲಿ ಮಳೆ ಗಾಳಿಗೆ ಬೀಳುವ ಮರಗಳನ್ನು ಕೊಂಬೆಗಳನ್ನು ಕತ್ತರಿಸಬೇಕೆಂದು ಕೋಲಾರ, ಕೆಜಿಎಫ್ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರೋಗಗಳ ವಿರುದ್ಧ ಮುನ್ನೆಚ್ಚರಿಕೆಮುಂಗಾರು ಮಳೆಗಾಲದಲ್ಲಿ ಯಾವುದೇ ಸಾಂಕ್ರಾಮಿಕ ರೋಗವನ್ನು ಎದುರಿಸಲು ಔಷಧಿಗಳು, ಸೋಂಕು ನಿವಾರಕಗಳು, ಲಸಿಕೆಗಳು, ವ್ಯಾಕ್ಸಿನೇಷನ್ ಮತ್ತು ಕ್ಲೋರಿನೇಷನ್ ಸಾಮಾಗ್ರಿಗಳನ್ನು ದಾಸ್ತಾನು ಮಾಡುವುದು ಹಾಗೂ ಮಳೆಗಾಲದಲ್ಲಿ ವ್ಯಾಪಿಸಬಹುದಾದ ಕಾಯಿಲೆಗಳ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕು ಮತ್ತು ವೈದ್ಯರು, ಅರೆವೈದ್ಯರು ಮತ್ತು ಆಂಬ್ಯುಲೆನ್ಸ್ ಗಳನ್ನು ಒಳಗೊಂಡ ತ್ವರಿತ ಪ್ರತಿಕ್ರಿಯೆ ತಂಡವನ್ನು ಅಗತ್ಯವಿದ್ದಲ್ಲಿ ರಚಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗೆ ತಿಳಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಾನುವಾರುಗಳ ಸುರಕ್ಷಿತ ಆಶ್ರಯ ತಾಣಗಳನ್ನು ಗುರುತಿಸುವುದು. ಜಾನುವಾರುಗಳಿಗೆ ಅವಶ್ಯ ಮೇವನ್ನು ದಾಸ್ತಾನು ಮಾಡಬೇಕೆಂದು ಪಶುಸಂಗೋಪನಾ ಇಲಾಖಾ ಅಧಿಕಾರಿಗೆ ತಿಳಿಸಿದರು.
ತುರ್ತು ಸಂದರ್ಭಗಳಲ್ಲಿ ಇತರೆ ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.ಸಭೆಯಲ್ಲಿ ಜಿ.ಪಂ ಸಿಇಒ ಪದ್ಮ ಬಸವಂತಪ್ಪ, ಎಡಿಸಿ ಡಾ.ಶಂಕರ ವಣಿಕ್ಯಾಳ್ ಇದ್ದರು.