ಬಾರದ ಮುಂಗಾರು ಮಳೆ, ಒಣಗುತ್ತಿವೆ ಬೆಳೆ

KannadaprabhaNewsNetwork |  
Published : Jul 15, 2026, 02:30 AM IST
ಮುಂಡರಗಿ ತಾಲೂಕಿನ ಹೆಸರೂರು ರಸ್ತೆಯಲ್ಲಿ ಮಳೆಯ ಕೊರತೆಯಿಂದ ಒಣಗುತ್ತಿರುವ ಮೆಕ್ಕೆಜೋಳದ ಬೆಳೆ. | Kannada Prabha

ಸಾರಾಂಶ

ಆರಂಭದ ಮಳೆಗೆ ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ತೊಗರಿ ಬೆಳೆಗಳು ಮೊಳಕೆಯೊಡೆದು ಭೂಮಿಯಿಂದ ಮೇಲೆದ್ದಿದ್ದವು. ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಹೊಲಗಳು ತೇವಾಂಶದ ಕೊರತೆಯಿಂದಾಗಿ ಬತ್ತಿವೆ.

ಶರಣು ಸೊಲಗಿ, ಎಸ್.ಜಿ. ತೆಗ್ಗಿನಮನಿಮುಂಡರಗಿ, ನರಗುಂದ: ಮಳೆ ಕೊರತೆಯಿಂದ ಮುಂಡರಗಿ ತಾಲೂಕಿನಲ್ಲಿ ಮುಂಗಾರು ಬೆಳೆಗಳು ಒಣಗುತ್ತಿದ್ದು, ತೇವಾಂಶದ ಕೊರತೆಯಿಂದ ಕಣ್ಣೆದುರೇ ಕಮರಿ ಹೋಗುತ್ತಿರುವುದನ್ನು ಕಂಡು ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಮುಂಗಾರು ಆರಂಭದಲ್ಲಿ ತಾಲೂಕಿನ ಕೆಲವೆಡೆ ಸುರಿದ ಹದವಾದ ಮಳೆಗೆ ರೈತರು ಸಂಭ್ರಮಿಸಿದ್ದರು. ಮಳೆರಾಯನನ್ನೇ ನಂಬಿ ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಭೂಮಿತಾಯಿಯ ಒಡಲು ತುಂಬಿದ್ದರು. ಆದರೆ, ಜೂನ್ ತಿಂಗಳಿನಲ್ಲಿ ತಾಲೂಕಿನಲ್ಲಿ ವಾಡಿಕೆಯಂತೆ 70 ಮಿಮೀ ಮಳೆಯಾಗಬೇಕಿತ್ತು. ಆದರೆ ಬಿದ್ದಿದ್ದು ಕೇವಲ 55 ಮಿಮೀ ಮಳೆ ಮಾತ್ರ. ಶೇ. 15ರಷ್ಟು ಮಳೆ ಕೊರತೆ ಇಡೀ ಕೃಷಿ ಚಟುವಟಿಕೆಯ ಮೇಲೆ ಬರಸಿಡಿಲಿನಂತೆ ಅಪ್ಪಳಿಸಿದೆ.

ಆರಂಭದ ಮಳೆಗೆ ಬಿತ್ತನೆ ಮಾಡಿದ್ದ ಹೆಸರು, ಮೆಕ್ಕೆಜೋಳ, ಸೂರ್ಯಕಾಂತಿ ಹಾಗೂ ತೊಗರಿ ಬೆಳೆಗಳು ಮೊಳಕೆಯೊಡೆದು ಭೂಮಿಯಿಂದ ಮೇಲೆದ್ದಿದ್ದವು. ಹಸಿರಿನಿಂದ ಕಂಗೊಳಿಸಬೇಕಾಗಿದ್ದ ಹೊಲಗಳು ತೇವಾಂಶದ ಕೊರತೆಯಿಂದಾಗಿ ಬತ್ತಿವೆ.

ಕೃಷಿ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ಮುಂಡರಗಿ ತಾಲೂಕಿನಲ್ಲಿ ಈ ಬಾರಿ ಒಟ್ಟು 49,565 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯ ತೀವ್ರ ಕೊರತೆಯಿಂದಾಗಿ ಇದುವರೆಗೆ ಕೇವಲ 26,099 ಹೆಕ್ಟೇರ್(ಶೇ. 52.66) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಅಂದರೆ, ತಾಲೂಕಿನ ಶೇ. 47.34 ರಷ್ಟು ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆಯೇ ಆಗದೆ ಜಮೀನುಗಳು ಬಿಕೋ ಎನ್ನುತ್ತಿವೆ.

ನೀರಾವರಿ ಮತ್ತು ಖುಷ್ಕಿ ಜಮೀನು ಸೇರಿ ತಾಲೂಕಿನಲ್ಲಿ ನಡೆದಿರುವ ಬಿತ್ತನೆಯ ವಿವರ ಮೆಕ್ಕೆಜೋಳ 10,310 ಹೆಕ್ಟೇರ್. ಹೆಸರು 8,202 ಹೆಕ್ಟೇರ್, ಸೂರ್ಯಕಾಂತಿ 4,035 ಹೆಕ್ಟೇರ್. ತೊಗರಿ 1,364 ಹೆಕ್ಟೇರ್, ಶೇಂಗಾ 926 ಹೆಕ್ಟೇರ್, ಕಬ್ಬು 676 ಹೆಕ್ಟೇರ್, ಹತ್ತಿ 248 ಹೆಕ್ಟೇರ್ ಬಿತ್ತನೆಯಾಗಿದೆ. ಮಳೆ ಕೊರತೆ ಜತೆಗೆ ಸುಡು ಬಿಸಿಲಿನ ತಾಪದಿಂದ ಬೆಳೆಗಳು ಬಾಡಿವೆ.ಬೆಳೆಹಾನಿ ಪರಿಹಾರಕ್ಕೆ ಆಗ್ರಹ

ನರಗುಂದ: ನರಗುಂದ ತಾಲೂಕಿನಲ್ಲಿ ಅಲ್ಪ ಪ್ರಮಾಣದಲ್ಲಿ ರೋಹಿಣಿ ಮಳೆಯಾಗಿದ್ದು, ಅದನ್ನೆ ನೆಚ್ಚಿಕೊಂಡು ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ ನಂತರ ದಿನಗಳಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಬೆಳೆ ಒಣಗಲಾರಂಭಿಸಿವೆ.

ತಾಲೂಕಿನಲ್ಲಿ 19420 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ ಇಲಾಖೆ ಗುರಿ ಮೀರಿ 20800 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಆದರೆ ಮಳೆ ಕೊರತೆಯಿಂದ ಬೆಳೆ ಒಣಗುತ್ತಿವೆ. ಆದ್ದರಿಂದ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಿ, ಬೆಳೆಸಾಲವನ್ನು ಮನ್ನಾ ಮಾಡಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ಉಮೇಶ ಮರ್ಚಪ್ಪನವರ ಆಗ್ರಹಿಸಿದರು.

ಮಳೆ ಆಗುವ ಲಕ್ಷಣವಿಲ್ಲ: ಹವಾಮಾನ ಮಾಹಿತಿ ಪ್ರಕಾರ ಇನ್ನೂ ಒಂದು ವಾರ ಮಳೆ ಆಗುವ ಲಕ್ಷಣವಿಲ್ಲ. ಹಾಗಾಗಿ ರೈತರು ಬಿತ್ತನೆ ಮಾಡಿದ ಜಮೀನುಗಳನ್ನು ಎಡೆ ಹೊಡೆದು ಬೆಳೆ ರಕ್ಷಿಸುವುದು ಅವಶ್ಯವಿದೆ ಎಂದು ನರಗುಂದ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಿಗಿ ತಿಳಿಸಿದರು.

ಪರಿಹಾರ ನೀಡಬೇಕು: ಮುಂಗಾರು ಮಳೆಯನ್ನು ನಂಬಿ ಸಾವಿರಾರು ರು. ಖರ್ಚು ಮಾಡಿ ಭೂಮಿಗೆ ಬೀಜ, ಗೊಬ್ಬರ ಹಾಕಿದ್ದೇವೆ. ಆದರೆ ಸಕಾಲಕ್ಕೆ ಮಳೆ ಬಾರದೇ ಹುಟ್ಟಿದ ಬೆಳೆಯೆಲ್ಲ ಒಣಗುತ್ತಿದೆ. ಸರ್ಕಾರ ತಕ್ಷಣವೇ ರೈತರಿಗೆ ಸೂಕ್ತವಾದ ಪರಿಹಾರ ನೀಡಬೇಕು ಎಂದು ಕಕ್ಕೂರು ಗ್ರಾಮದ ರೈತ ಶರಣಪ್ಪ ಜುಟ್ಲಣ್ಣವರ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಗಾರು ಹಂಗಾಮಿನಲ್ಲೇ ಬರಿದಾದ ಚೆಕ್‌ ಡ್ಯಾಂಗಳು
15ನೇ ಹಣಕಾಸು ಅನುದಾನ ವಿಳಂಬ: ಸಂಕಷ್ಟದಲ್ಲಿ ಗ್ರಾಮ ಪಂಚಾಯಿತಿಗಳು