ಪ್ರತಿ ಜಿಲ್ಲೆಯಲ್ಲೂ ಛಲವಾದಿ ಮಹಾಸಭೆ ಸಂಘಟನೆಗೆ ಮಾಸಿಕ ಸಭೆ

KannadaprabhaNewsNetwork | Published : Mar 25, 2025 12:48 AM

ಸಾರಾಂಶ

ಚಾಮರಾಜನಗರದಲ್ಲಿ ರಾಜ್ಯ ಛಲವಾದಿ ಮಹಾಸಭೆ ಅಧ್ಯಕ್ಷೆ ವಾಣಿ ಶಿವರಾಂ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಕಾರ್ಯದರ್ಶಿ ಮೈಕೋ ನಾಗರಾಜ್, ಜಿಲ್ಲಾಧ್ಯಕ್ಷ ರಮೇಶ್, ರಾಜ್ಯ ನಿರ್ದೇಶಕ ಸಿದ್ದರಾಜು, ನಾಗೇಶ್ ಇದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನನ್ನ ಪತಿ ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಂ ಅವರು ಅಸ್ತಿತ್ವಕ್ಕೆ ತಂದ ಛಲವಾದಿ ಮಹಾಸಭೆಯನ್ನು ದೊಡ್ದಮಟ್ಟದಲ್ಲಿ ಸಂಘಟನೆ ಮಾಡುವ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ, ಮಾಸಿಕ ಸಭೆ ನಡೆಸಿ ಸಂಘಟನೆ ಮಹತ್ವ ಕುರಿತು ಛಲವಾದಿ ಬಂಧುಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ರಾಜ್ಯ ಛಲವಾದಿ ಮಹಾಸಭೆ ಅಧ್ಯಕ್ಷೆ ವಾಣಿ ಶಿವರಾಂ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೆ. ಶಿವರಾಂ ಅವರು ಬದುಕಿದ್ದಾಗ ಛಲವಾದಿ ಮಹಾಸಭೆಯ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅನೇಕ ಕನಸುಗಳನ್ನು ಕಂಡಿದ್ದರು ಎಂದರು.

ಅವರ ಕನಸುಗಳನ್ನು ಸಾಕಾರಗೊಳಿಸುವುದು ನನ್ನ ಜವಾಬ್ದಾರಿಯಾಗಿದೆ. ಇದಕ್ಕಾಗಿಯೇ ಬೆಂಗಳೂರಿನಲ್ಲಿ ಅಂದಾಜು ೨೦ ಕೋಟಿ ರು. ವೆಚ್ಚದಲ್ಲಿ ಛಲವಾದಿ ಮಹಾಸಭೆ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ. ಆದರೆ ಹಣಕಾಸಿನ ಕೊರತೆಯಿಂದ ಕಟ್ಟಡ ಅರ್ಧಕ್ಕೆ ನಿಂತಿದೆ. ಕಟ್ಟಡ ಪೂರ್ಣಗೊಳಿಸಲು ಸರ್ಕಾರದಿಂದ ಸೂಕ್ತ ಅನುದಾನ ಮಂಜೂರು ಮಾಡಿಸಿ ಕೊಡುವಂತೆ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಮಾಡಿದ್ದೇವೆ. ಅವರೂ ನಮ್ಮ ಮನವಿಗೆ ಸ್ಪಂದಿಸಿ ಈ ವಿಚಾರವನ್ನು ಸಂಪುಟ ಸಭೆಯ ಮುಂದಿಟ್ಟು ಅನುಮೋದನೆ ಪಡೆದು, ಕಟ್ಟಡ ಪೂರ್ಣಗೊಳಿಸಲು ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡ ಪೂರ್ಣಗೊಂಡ ನಂತರ ಅವರಿಂದಲೇ ಉದ್ಘಾಟನೆ ಮಾಡಿಸಲಾಗುವುದು ಎಂದರು.

ಸಮುದಾಯದ ಬಂಧುಗಳು ಛಲವಾದಿ ಮಹಾಸಭೆಯ ಮೂಲಕ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತಮಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚಿತ್ರದುರ್ಗ ಛಲವಾದಿ ಮಹಾಸಂಸ್ಥಾನ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಅತಿ ಹಿಂದುಳಿದಿರುವ ಛಲವಾದಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು, ಅವರನ್ನು ಆರ್ಥಿಕವಾಗಿ ಉದ್ಯಮಿಗಳನ್ನಾಗಿಸಬೇಕು ಎಂಬುದು ನನ್ನ ಸಂಕಲ್ಪವಾಗಿದೆ. ಅಂಬೇಡ್ಕರ್ ಜಯಂತಿಯಂದು ಒಂದು ಸಾಪ್ಟ್ ವೇರ್ ಲಾಂಚ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು, ಕಾರ್ಯದರ್ಶಿ ಮೈಕೋ ನಾಗರಾಜ್, ಜಿಲ್ಲಾಧ್ಯಕ್ಷ ರಮೇಶ್, ರಾಜ್ಯ ನಿರ್ದೇಶಕ ಸಿದ್ದರಾಜು, ನಾಗೇಶ್ ಇದ್ದರು.

Share this article