ಕನ್ನಡಪ್ರಭ ವಾರ್ತೆ ಶಿರಾ ಪಿ.ಮೂಡ್ಲೇಗೌಡ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಶಿರಾ ಕ್ಷೇತ್ರದ ಶಾಸಕರಾಗಿ ಜನಮಾನಸದಲ್ಲಿ ಉಳಿಯುವಂತಹ ಸೇವೆ ಮಾಡಿದ್ದು ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಇಂದಿನ ರಾಜಕಾರಣಿಗಳು ಸಾಗಬೇಕಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು. ಅವರು ಶನಿವಾರ ನಗರದ ರಂಗನಾಥ ಕಾಲೇಜು ಆವರಣದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಾಸಕ ದಿ.ಪಿ.ಮೂಡ್ಲೇಗೌಡ ಇವರ ಸ್ಮರಣಾರ್ಥ ಪಿ.ಮೂಡ್ಲೇಗೌಡರ ಅಭಿಮಾನಿಗಳ ಬಳಗದ ವತಿಯಿಂದ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶಿರಾ ತಾಲೂಕಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಿ ಮೂಡ್ಲೇಗೌಡ ಅವರು ಗಾಂಧೀಜಿಯವರ ಆದರ್ಶಗಳನ್ನು ಅಳವಳಿಸಿಕೊಂಡವರು. ಅವರ ಹಾದಿಯಲ್ಲಿ ನಡೆದವರು. ಅವರು ನಮ್ಮ ಶಿರಾ ತಾಲೂಕಿನ ಹೆಮ್ಮೆಯಾಗಿದ್ದಾರೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು. ವಿದ್ಯೆಯೇ ನಿಮಗೆ ಶಾಶ್ವತವಾದ ಆಸ್ತಿಯಾಗಿದೆ ಎಂದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಮಾತನಾಡಿ, ಪಿ ಮೂಡ್ಲೇಗೌಡ ಅವರು ಇಂದಿನ ರಾಜಕಾರಣಿಗಳಿಗೆ ಆದರ್ಶವಾಗಿದ್ದಾರೆ. ಪ್ರಸ್ತುತ ರಾಜಕಾರಣಿಗಳು ಕೇವಲ ಪ್ರಚಾರದಲ್ಲಿ ತೊಡಗಿ ಮುನ್ನಲೆಗೆ ಬರುತ್ತಿದ್ದಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿರಾ ತಾಲೂಕಿನ ಪಿ.ಮೂಡ್ಲೇಗೌಡ ಅವರು ಆದರ್ಶ ರಾಜಕಾರಣಿಯಾಗಿ ತಾಲೂಕಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವುದರಿಂದ ಅವರು ಮುಂದೆ ಹೆಚ್ಚಿನ ಅಧ್ಯಯನ ಮಾಡಲು ಪ್ರೋತ್ಸಾಹ ಸಿಗುತ್ತದೆ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷ ಕೆ.ಎಲ್.ಮುಕುಂದಪ್ಪ, ಮಾಜಿ ಜಿ.ಪಂ. ಸದಸ್ಯ ಸಿ.ಎಂ.ಪ್ರಕಾಶ್ ಗೌಡ, ಕುಂಚ ಪರಿವಾರ ಸಂಘದ ಅಧ್ಯಕ್ಷ ಜಿ.ಆರ್.ರಂಗನಾಥ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ನಿವೃತ್ತ ಪ್ರಾಧ್ಯಾಪಕ ಎಸ್.ಎಲ್.ಮೋಹನ್, ರಾಮಕೃಷ್ಣ ಆಸ್ಪತ್ರೆಯ ಡಾ.ಕೆ.ರಾಮಕೃಷ್ಣ, ಚಿತರಹಳ್ಳಿ ಜಿ.ಮೂಡಲಗಿರಿಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕೆ.ತಿಮ್ಮಯ್ಯ, ನಗರಸಭೆ ಸದಸ್ಯ ಬಿ.ಎಂ.ರಾಧಾಕೃಷ್ಣ, ಮಂಜುಶ್ರೀ ಶಾಲೆಯ ಕಾರ್ಯದರ್ಶಿ ಮಹಲಿಂಗಪ್ಪ, ರೋಟರಿ ಸಂಸ್ಥೆಯ ಮಂಜುನಾಥ ಗೌಡ, ಮುಖಂಡರಾದ ಮುದ್ದುಗಣೇಶ್, ಬಾಲರಾಜ್, ಜುಂಜೇಗೌಡ, ಬಿ.ಆರ್.ಜನಾರ್ಧನ್, ವಿಷ್ಣುಗೌಡ ಸೇರಿದಂತೆ ಹಲವರು ಹಾಜರಿದ್ದರು. ಕೋಟ್..ರಾಜಕಾರಣವೆಂದರೆ ಕೇವಲ ಸಭೆ ಸಮಾರಂಭಗಳಿಗೆ ಹೋಗಿ ಬರುವುದಲ್ಲ. ಬದಲಾಗಿ ಜನರ ಸೇವೆ ಮಾಡುವುದಾಗಿದೆ. ಇಂದಿನ ದಿನಗಳಲ್ಲಿ ರಾಜಕಾರಣಿಗಳು ಎಂದರೆ ಎಲ್ಲರೂ ಮೂಗಿ ಮುರಿಯುತ್ತಾರೆ. ಆದರೆ ಇಷ್ಟು ದಿನಗಳಾದರೂ ಸಹ ಮೂಡ್ಲೇಗೌಡರ ಬಗ್ಗೆ ಅಪಾರ ಅಭಿಮಾನವಿದೆ ಎಂದರೆ ಅವರು ಮಾಡಿರುವ ಕಾರ್ಯಗಳು ಅವರನ್ನು ನೆನಪಿಟ್ಟುಕೊಳ್ಳುವಂತವು ಎಂಬುದನ್ನು ನಾವು ಅರ್ಥೈಸಿಕೊಂಡು ಅವರಂತೆ ನಡೆಯಬೇಕಿದೆ. - ಎಸ್ ಆರ್ ಗೌಡ, ನಿರ್ದೇಶಕರು, ತುಮುಲ್